ADVERTISEMENT

ಸ್ತ್ರೀ ನೀರುಗಂಟಿಗೆ ‘ನಲ್‌–ಜಲ್‌ ಮಿತ್ರ’

ಕೌಶಲ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ತರಬೇತಿ

ಎಂ.ಮಹೇಶ
Published 18 ಫೆಬ್ರುವರಿ 2025, 6:21 IST
Last Updated 18 ಫೆಬ್ರುವರಿ 2025, 6:21 IST
   

ಮೈಸೂರು: ಹಳ್ಳಿಗಳಲ್ಲಿ ಎಲ್ಲರಿಗೂ ಬಹಳ ಅಗತ್ಯವಾದ ನೀರು ಪೂರೈಕೆಯ ನಿರ್ವಹಣೆಯಲ್ಲಿ ಮಹಿಳಾ ಭಾಗಿದಾರಿಕೆಗಾಗಿ ಸ್ವಸಹಾಯ ಸಂಘದ ಪ್ರತಿನಿಧಿಗಳಿಗೆ ತಾಂತ್ರಿಕ ಕೌಶಲ ನೀಡಿ ಸಜ್ಜುಗೊಳಿಸುವ ಯೋಜನೆಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪಾಲುದಾರಿಕೆಯಲ್ಲಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ರಾಜ್ಯ ಕೌಶಲ ಅಭಿವೃದ್ಧಿ  ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ‘ನಲ್‌–ಜಲ್‌ ಮಿತ್ರ’ ಶೀರ್ಷಿಕೆಯ ಯೋಜನೆಯಡಿ ಜಿಲ್ಲೆಯಲ್ಲಿರುವ 256 ಗ್ರಾಮ ಪಂಚಾಯಿತಿಗಳಿಂದ ತಲಾ ಇಬ್ಬರು ಸ್ವಸಹಾಯ ಸಂಘದ ಸದಸ್ಯರಾದ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಗ್ರಾಮಗಳಲ್ಲಿ ನೀರು ಪೂರೈಕೆಯ ವಿಷಯದಲ್ಲಿ ಅವರನ್ನು ತೊಡಗಿಸಿಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ಅವರಿಗೆ ಕೊಡಲಾಗುವುದು.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಹಂಚಿಕೆಯಲ್ಲಿ ‘ಜಲಜೀವನ ಮಿಷನ್‌’ ಯೋಜನೆಯಡಿ ಮನೆ ಮನೆಗೂ ಗಂಗೆ ಎಂಬ ಕಾರ್ಯಕ್ರಮದಲ್ಲಿ ನೀರಿನ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. ಹೀಗೆ, ಒದಗಿಸಲಾಗಿರುವ ಸಂಪರ್ಕಗಳಿಗೆ ನೀರು ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಹಾಗೂ ಸಮಸ್ಯೆಗಳು ಎದುರಾದರೆ ನಿರ್ವಹಿಸಲು ಬೇಕಾದ ತಾಂತ್ರಿಕ ಕೌಶಲವನ್ನು ‘ನಲ್‌–ಜಲ್‌ ಮಿತ್ರ’ ತರಬೇತಿ ಕಾರ್ಯಕ್ರಮದಲ್ಲಿ ನೀಡಲಾಗುವುದು.

ಪುರುಷರಷ್ಟೆ ಮಾಡುತ್ತಿದ್ದಾರೆ: 

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಅವರವರ ಊರಿನಲ್ಲಿ ನೀರುಗಂಟಿಗಳಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಉದ್ದೇಶವೂ ಇದೆ ಎಂದು ತಿಳಿದುಬಂದಿದೆ. ಈವರೆಗೂ ನೀರುಗಂಟಿ (ವಾಟರ್‌ಮನ್‌) ಕೆಲಸವನ್ನು ಅಲ್ಲಿನ ಪುರುಷರಷ್ಟೆ ಮಾಡುತ್ತಿದ್ದಾರೆ. ಇನ್ಮುಂದೆ, ಮಹಿಳೆಯರನ್ನೂ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಲ್‌–ಜಲ್‌ ತರಬೇತಿ ಕೊಡಲಾಗುತ್ತಿದೆ.

ಮಹಿಳಾ ಸಶಕ್ತೀರಣದ ಭಾಗವಾಗಿ ತರಬೇತಿ ರೂಪಿಸಲಾಗಿದೆ. ನೀರಿನ ಪೈಪ್‍ಗಳ ದುರಸ್ತಿ, ಕೊಳಾಯಿ ಜೋಡಣೆ, ವಿದ್ಯುತ್ ಪರಿಕರಗಳ ದುರಸ್ತಿ ಮೊದಲಾದವುಗಳನ್ನು ತಿಳಿದುಕೊಂಡಿದ್ದರೆ, ನೀರು ಪೂರೈಕೆ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎದುರಾಗುವ ತೊಂದರೆಗಳನ್ನು ನಿರ್ವಹಿಸಲು ಸಹಕಾರಿ ಆಗಲಿದೆ ಎಂದಬ ಆಶಯ ಹೊಂದಲಾಗಿದೆ.

ಮಹಿಳೆಯರು ಸಾಮಾನ್ಯವಾಗಿ ಬ್ಯೂಟಿಪಾರ್ಲರ್, ಟೈಲರಿಂಗ್, ಫ್ಯಾಷನ್‌ ಡಿಸೈನಿಂಗ್‌ ಮೊದಲಾದ ತರಬೇತಿಗಷ್ಟೇ ಸಿಮೀತವಾಗಬಾರದು ಎಂಬ ಉದ್ದೇಶದಿಂದ ಸ್ಥಳೀಯವಾಗಿಯೇ ಕೆಲಸ ಕಂಡುಕೊಳ್ಳಲು ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಸರ್ಕಾರ ನೀಡುತ್ತಿದೆ. ಕೌಶಲ ಪರಿಣಿತಿ ಹೊಂದುವ ಮೂಲಕ ಜೀವನೋಪಾಯಕ್ಕೆ ದಾರಿ ಮಾಡಿಕೊಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ತರಬೇತಿಗೆ ಗುರುತು: 

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಸ್ವಸಹಾಯ ಸಂಘದ ಇಬ್ಬರು ಮಹಿಳಾ ಸದಸ್ಯರಿಗೆ ತರಬೇತಿಗೆ ಗುರುತಿಸಲಾಗಿದೆ. ತರಬೇತಿ ನಂತರ ಪ್ರತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ, ಟೂಲ್ ಕಿಟ್ ಹಾಗೂ ಎರಡು ಜೊತೆ ಸಮವಸ್ತ್ರ ನೀಡಲಾಗುವುದು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಪ್ರತಿ ಅಭ್ಯರ್ಥಿಗೆ ₹24,790 ಪಾವತಿಸುತ್ತದೆ. ಇದನ್ನು ಗ್ರಾಮ 15ನೇ ಹಣಕಾಸು ಆಯೋಗ ಮತ್ತು ಇತರ ಅನುದಾನಗಳಿಂದ ಪೂರೈಸಬೇಕು ಎಂದು ಸೂಚಿಸಲಾಗಿದೆ. ತರಬೇತಿಯ ನಂತರ, ಮಹಿಳೆಯರು ಜಲಜೀವನ್ ಮಿಷನ್ ಯೋಜನೆಗಾಗಿ ಗ್ರಾಮ ಪಂಚಾಯಿತಿಯಲ್ಲಿ ನೀರು ವಿತರಣಾ ನಿರ್ವಾಹಕರಾಗಿ ಕೆಲಸ ನಿರ್ವಹಿಸುವರು ಎಂದು ತಿಳಿಸಲಾಗಿದೆ. ಒಟ್ಟು 40 ದಿನಗಳವರೆಗೆ ತರಬೇತಿಯನ್ನು ಉಚಿತವಾಗಿ ಒದಗಿಸುವ ಕಾರ್ಯಕ್ರಮವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.