ಮೈಸೂರು: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಆಯ್ದ ಕಥೆಗಳನ್ನು ಆಧರಿಸಿದ, ಮಹಿಳೆಯರೇ ರೂಪಿಸಿದ ‘ಒಮ್ಮೆ ಹೆಣ್ಣಾಗು’ ನಾಟಕದ ಪ್ರದರ್ಶನವನ್ನು ಇಲ್ಲಿನ ರಂಗಾಯಣ ಹಮ್ಮಿಕೊಂಡಿದೆ.
ಅ.12ರಂದು (ಭಾನುವಾರ) ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಪ್ರಥಮ ಪ್ರದರ್ಶನ ನಡೆಯಲಿದ್ದು, 4–5 ವಾರಗಳವರೆಗೆ ‘ವಾರಾಂತ್ಯ ರಂಗಪ್ರದರ್ಶನ’ವಾಗಿ ಆಯೋಜಿಸಲು ನಿರ್ಧರಿಸಲಾಗಿದೆ.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ನಾಟಕದ ವಿವರ ನೀಡಿದರು.
‘ಹರಿಯಾಣದ ಎನ್‌ಎಸ್‌ಡಿ ಕಲಾವಿದೆ ಸವಿತಾ ರಾಣಿ ಪರಿಕಲ್ಪನೆ, ವಿನ್ಯಾಸ, ನಿರ್ದೇಶನ ಮತ್ತು ಶ್ವೇತಾರಾಣಿ ಎಚ್.ಕೆ. ಸಹ ನಿರ್ದೇಶನದಲ್ಲಿ ಮೂಡಿಬಂದಿರುವ ಹೊಸ ರಂಗ ಪ್ರಯೋಗವಿದು. ರಂಗಾಯಣದ ಕಲಾವಿದೆಯರಾದ ನಂದಿನಿ ಕೆ.ಆರ್. ಹಾಗೂ ಶಶಿಕಲಾ ಬಿ.ಎನ್. ಅಭಿನಯಿಸುವರು. ಬೆಳಕು ವಿನ್ಯಾಸ ಮಹೇಶ್ ಕಲ್ಲತ್ತಿ ಅವರದು’ ಎಂದು ತಿಳಿಸಿದರು.
ನಾಲ್ಕು ಕಥೆಗಳು
‘ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಪುಸ್ತಕದಿಂದ ‘ಶಾಯಿಸ್ತಾ ಮಹಲ್‌ನ ಕಲ್ಲು ಚಪ್ಪಡಿಗಳು‘, ‘ಕಪ್ಪು ನಾಗರಹಾವು’, ‘ಎದೆಯ ಹಣತೆ’ ಹಾಗೂ ‘ಒಮ್ಮೆ ಮಹಿಳೆಯಾಗಿದ್ದಳು’– ಈ ನಾಲ್ಕು ಕಥೆಗಳನ್ನು ತೆಗೆದುಕೊಂಡು ನಾಟಕ ರೂಪ ಕೊಡಲಾಗಿದೆ. ಪುರುಷ ಪ್ರಧಾನ ಸಮಾಜದ ಮುಖವನ್ನು ಬಹಿರಂಗಪಡಿಸಲು ಹಾಗೂ ಅದನ್ನು ಪ್ರಶ್ನಿಸುವಂತೆ ನಾಟಕವನ್ನು ಹೆಣೆಯಲಾಗಿದೆ’ ಎಂದು ಮಾಹಿತಿ ನೀಡಿದರು.
‘1 ಗಂಟೆ 20 ನಿಮಿಷದ ಈ ಪ್ರಯೋಗ ಒಂದು ನಿರೂಪಣೆಯಾಗಿದೆ. ಮಹಿಳೆಯರ ಜೀವನಾನುಭವಗಳ ಮೇಲಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ಬಿಂಬಿಸುವುದು, ಪುರುಷ ಪ್ರಧಾನ ಸಮಾಜದಲ್ಲಿನ ಕರಾಳ ಮುಖವನ್ನು ಹಾಗೂ ಮಹಿಳೆಯರ ಮೇಲಿನ ಶೋಷಣೆಗಳನ್ನು ಪ್ರಶ್ನಿಸುವ ಈ ನಾಟಕವು ಮಾನವೀಯತೆ ಮತ್ತು ಅಂತಃಕರಣವನ್ನು ತೆರೆದಿಡುತ್ತದೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ರಂಗ ಸಮಾಜದ ಸದಸ್ಯ ಸುರೇಶ್‌ಬಾಬು, ನಿರ್ದೇಶಕಿ ಸವಿತಾ ರಾಣಿ, ಸಹ ನಿರ್ದೇಶಕಿ ಶ್ವೇತಾರಾಣಿ ಎಚ್.ಕೆ., ಕಲಾವಿದೆಯರಾದ ನಂದಿನಿ ಕೆ.ಆರ್. ಹಾಗೂ ಶಶಿಕಲಾ ಬಿ.ಎನ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.