ADVERTISEMENT

ಜನರ ಧ್ವನಿ ಹತ್ತಿಕ್ಕುವ ವ್ಯವಸ್ಥಿತ ಹುನ್ನಾರ: ನಾಗಮೋಹನದಾಸ್ ಕಳವಳ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 11:41 IST
Last Updated 14 ಫೆಬ್ರುವರಿ 2020, 11:41 IST
ಎಫ್‌ಎಂಆರ್‌ಎಐ ಸಾಮಾನ್ಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಡಾ.ಕೆ.ಜಾವೀದ್‌ ನಯೀಮ್, ಎಚ್‌.ಎನ್‌.ನಾಗಮೋಹನದಾಸ್, ಎ.ಕೆ.ಪದ್ಮನಾಭನ್‌ ಮತ್ತಿತರರು ಪಾಲ್ಗೊಂಡರು
ಎಫ್‌ಎಂಆರ್‌ಎಐ ಸಾಮಾನ್ಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಡಾ.ಕೆ.ಜಾವೀದ್‌ ನಯೀಮ್, ಎಚ್‌.ಎನ್‌.ನಾಗಮೋಹನದಾಸ್, ಎ.ಕೆ.ಪದ್ಮನಾಭನ್‌ ಮತ್ತಿತರರು ಪಾಲ್ಗೊಂಡರು   

ಮೈಸೂರು: ‘ದೇಶದ್ರೋಹ’ದ ಪ್ರಕರಣ ದಾಖಲಿಸಿ ಜನರ ಧ್ವನಿಯನ್ನು ಹತ್ತಿಕ್ಕುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಕಳವಳ ವ್ಯಕ್ತಪಡಿಸಿದರು.

ಭಾರತೀಯ ವೈದ್ಯಕೀಯ ಹಾಗೂ ಔಷಧ ಮಾರಾಟ ಪ್ರತಿನಿಧಿಗಳ ಸಂಘಗಳ ಒಕ್ಕೂಟದ (ಎಫ್‌ಎಂಆರ್‌ಎಐ) ಸಾಮಾನ್ಯ ಸಭೆಯನ್ನುದ್ದೇಶಿಸಿ ಶುಕ್ರವಾರ ಅವರು ಮಾತನಾಡಿದರು.

ದೇಶದ್ರೋಹ, ನ್ಯಾಯಾಂಗ ನಿಂದನೆಯಂತಹ ವಸಾಹತುಕಾಲದ ಕಾನೂನುಗಳನ್ನು ಕಾನೂನು ಪುಸ್ತಕದಿಂದಲೇ ಕಿತ್ತುಹಾಕಬೇಕು. ಈ ಕಾನೂನುಗಳು ಕಳೆದ 70 ವರ್ಷಗಳಲ್ಲಿ ಬಳಕೆಗಿಂತ ಹೆಚ್ಚಾಗಿ ದುರ್ಬಳಕೆಯಾಗಿವೆ ಎಂದು ಹೇಳಿದರು.

ADVERTISEMENT

ಇವೆಲ್ಲವೂ ಬ್ರಿಟಿಷರ ಕಾಲದ ಕಾನೂನುಗಳು. ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಅವರು ಇಂತಹ ಕಾನೂನುಗಳನ್ನು ಜಾರಿಗೆ ತಂದಿದ್ದರು. ಅವುಗಳನ್ನು ಕಿತ್ತುಹಾಕಿದರೆ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಕೇವಲ ಹೊಗಳುವುದಕ್ಕೆ ಮಾತ್ರ ಸೀಮಿತವಲ್ಲ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಪ್ರಶ್ನಿಸುವ ಮತ್ತು ಟೀಕಿಸುವ ಹಕ್ಕುಗಳನ್ನು ಒಳಗೊಂಡಿದೆ. ಆದರೆ ಇಂದು ಜನರ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ದೂರಿದರು.

ದೇಶ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂವಿಧಾನವೇ ಕಾರಣ ಎಂದು ಕೆಲವು ಹೇಳುತ್ತಿದ್ದಾರೆ. ಅದು ಅವರ ತಪ್ಪು ತಿಳುವಳಿಕೆ. ಸಂವಿಧಾನದಲ್ಲಿ ಯಾವುದೇ ತಪ್ಪುಗಳು ಇಲ್ಲ. ಅದನ್ನು ಜಾರಿಗೆ ತರುವವರು ತಪ್ಪು ಮಾಡುತ್ತಿದ್ದಾರೆ. ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ಜಾರಿಗೊಳಿಸುವ ಸ್ಥಾನಗಳಲ್ಲಿದ್ದಾರೆ. ಇದರಿಂದಾಗಿ ದೇಶ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ದೇಶವು ಇಂದು ಸಮಸ್ಯೆಗಳ ಜತೆ ಸವಾಲಗಳನ್ನೂ ಎದುರಿಸುತ್ತಿದೆ. ಭಯೋತ್ಪಾದನೆ, ಮೂಲಭೂತವಾದ, ಖಾಸಗೀಕರಣದಂತಹ ಸವಾಲು ನಮ್ಮ ಮುಂದಿವೆ. ಇವುಗಳಿಂದ ಹೊರಬರಬೇಕಾದರೆ ಸಂವಿಧಾನ ತೋರಿಸಿರುವ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕ ವರ್ಗಕ್ಕೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕಾರ್ಮಿಕ ಸಂಘಟನೆಗಳು ಇದುವರೆಗೆ ಸಮರ್ಥವಾಗಿ ಮಾಡದಿರುವುದು ದುರದೃಷ್ಟಕರ. ಸಂವಿಧಾನದ ಆಶಯಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.