ADVERTISEMENT

ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಯದುವೀರ್ ಮನವಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:37 IST
Last Updated 12 ಫೆಬ್ರುವರಿ 2026, 7:37 IST
ಯದುವೀರ್
ಯದುವೀರ್   

ಮೈಸೂರು: ‘ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಂದ ದೇಶ–ವಿದೇಶಗಳಿಗೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಈಗಿರುವ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ತತ್ಕಾಲ್‌ ಸೇವೆಯನ್ನೂ ಒಳಗೊಂಡಂತೆ ಪೂರ್ಣ ಪ್ರಮಾಣದ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕೋರಿದ್ದಾರೆ.

ಈ ಕುರಿತು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

‘ಇಲ್ಲಿ ಈಗಿರುವ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಒಪಿಎಸ್‌ಕೆ)ವನ್ನು ತತ್ಕಾಲ್ ಸೇವೆಗಳೊಂದಿಗೆ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಚ್‌ಕೆ)ವನ್ನಾಗಿ ಮೇಲ್ದರ್ಜೆಗೇರಿಸಬೇಕಾದ ಅಗತ್ಯವಿದೆ. ಇಟ್ಟಿಗೆಗೂಡಿನಲ್ಲಿರುವ ಪಾಸ್‌ಪೋರ್ಟ್ ಕಚೇರಿ ಆವರಣಕ್ಕೆ ಸ್ಥಳಾಂತರಿಸುವಂತೆ ಕೋರಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಮೈಸೂರಿನಲ್ಲಿ ಉನ್ನತ ಶಿಕ್ಷಣ, ಐಟಿ ವಲಯ, ಪ್ರವಾಸೋದ್ಯಮ ಮತ್ತು ವಿದೇಶಗಳಲ್ಲಿ ಉದ್ಯೋಗ ಕ್ಷೇತ್ರ ವಿಸ್ತರಣೆಯಾಗಿದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಪಾಸ್‌ಪೋರ್ಟ್ ಸೇವೆಗಳಿಗೆ ಬೇಡಿಕೆ ತೀವ್ರವಾಗಿದೆ’ ಎಂದಿದ್ದಾರೆ.

‘ಸೀಮಿತ ಸಾಮರ್ಥ್ಯ ಮತ್ತು ತತ್ಕಾಲ್ ಸೇವೆ ಇಲ್ಲದಿರುವುದರಿಂದ ಪ್ರಸ್ತುತ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರವು ಸಾರ್ವಜನಿಕ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಎಲ್ಲದ್ದಕ್ಕೂ ಬೆಂಗಳೂರಿಗೆ ತೆರಳಬೇಕಾದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ’ ಎಂದು ಹೇಳಿದ್ದಾರೆ.

‘ಇಲ್ಲಿ ಪೂರ್ಣ ಪ್ರಮಾಣದ ಕೇಂದ್ರ ಆರಂಭವಾದರೆ, ಬೆಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮೇಲಿನ ಅವಲಂಬನೆ ತಗ್ಗಲಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ’ ಎಂದಿದ್ದಾರೆ. 

‘ನನ್ನ ಕ್ಷೇತ್ರದ ವ್ಯಾಪ್ತಿಯ ಕೊಡಗಿನಲ್ಲಿ ಪಾಸ್‌ಪೋರ್ಟ್‌ ಪಡೆಯಬೇಕಾದದವರು ಮೈಸೂರು ಅಥವಾ ಬೆಂಗಳೂರಿಗೆ ಬರಬೇಕಾದ ಅನಿವಾರ್ಯವಿದೆ. ಹೀಗಾಗಿ, ಅಲ್ಲಿ ಮೆಗಾ ಪಾಸ್‌ಪೋರ್ಟ್‌ ಮೇಳ ಆಯೋಜಿಸುವಂತೆಯೂ ಕೋರಿದ್ದೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.