ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಜಾತಿ ಜನಗಣತಿ ಮುನ್ನೆಲೆಗೆ ತಂದಿದ್ದಾರೆ ಎಂಬುದು ಸುಳ್ಳು’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುರ್ಚಿಗೆ ಆಪತ್ತೆಲ್ಲಿ ಬಂದಿದೆ? ಅವರ ಕುರ್ಚಿ ಸುರಕ್ಷಿತವಾಗಿದೆ. ಇಳಿಸಬೇಕೆಂದು ಯಾರಾದರೂ ಹೇಳಿದ್ದಾರಾ? ನಮ್ಮ ಶಾಸಕರು ಮತ್ತು ಹೈಕಮಾಂಡ್‌ನವರು ಸಿ.ಎಂ. ಪರ ನಿಂತಿದ್ದಾರೆ’ ಎಂದರು.
‘ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಗೂ–ಜಾತಿ ಜನಗಣತಿ ವರದಿಗೂ ಸಂಬಂಧವಿಲ್ಲ. ಈಗಿನದಕ್ಕಿಂತಲೂ ಕಠಿಣ ಪರಿಸ್ಥಿತಿ ಹಿಂದೆ ಇತ್ತು. ಆದರೂ ಆಗ ವರದಿ ತಂದಿರಲಿಲ್ಲ’ ಎಂದು ಹೇಳಿದರು.
‘ಮುಡಾ ಕೇಸ್ ಇ.ಡಿಗೆ ವಹಿಸಿದರೂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರುವುದಿಲ್ಲ. ಮುಂದಿನ ನ್ಯಾಯಾಲಯಕ್ಕೆ ಅಪೀಲು ಹಾಕುತ್ತೇವೆ. ಮುಡಾ ಪ್ರಕರಣದಲ್ಲಿ ಸತ್ಯಾಂಶವೇನೂ ಇಲ್ಲ. ಹೀಗಾಗಿ, ಸಿದ್ದರಾಮಯ್ಯ ಹೆದರುವ ಅಗತ್ಯವಿಲ್ಲ’ ಎಂದರು.
‘ಇ.ಡಿ ಬೇಕೆಂದೇ ಹಿಂಸೆ ನೀಡುತ್ತಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ. ಇ.ಡಿ ತನಿಖೆ ಅದರ ಪಾಡಿಗೆ ನಡೆಯುತ್ತದೆ; ಸಿದ್ದರಾಮಯ್ಯ ಕುರ್ಚಿಯಲ್ಲಿ ಮುಂದುವರಿಯುತ್ತಾರೆ. ಮುಡಾ ಕೇಸನ್ನು ಸಿಬಿಐಗೇ ಬೇಕಿದ್ದರೂ ಕೊಡಲಿ. ತಪ್ಪೇ ಮಾಡಿಲ್ಲವಾದ್ದರಿಂದ, ಹೆದರೋಲ್ಲ’ ಎಂದರು.
‘ಜಾತಿ ಜನಗಣತಿ ಮೂಲ ಪ್ರತಿ ಹಾಳಾಗಿದ್ದರೆ ಸ್ಪಷ್ಟನೆಯನ್ನು ಆಯೋಗದ ಅಂದಿನ ಮುಖ್ಯಸ್ಥರು ನೀಡುತ್ತಾರೆ. ಮೂಲ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪದಲ್ಲಿ ಹುರುಳಿಲ್ಲ’ ಎಂದು ಹೇಳಿದರು.
‘ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಪ್ರಬಲ ವರ್ಗಗಳಿಗೆ ಅನ್ಯಾಯ ಮಾಡಿಬಿಡುತ್ತಾರೆ ಎಂಬುದು ಪೂರ್ವಗ್ರಹಪೀಡಿತ. ಗಣತಿಯಿಂದ ಅನುಕೂಲ ಆಗುತ್ತದೆಯೇ ಹೊರತು ಯಾರಿಗೂ ಅನ್ಯಾಯವಾಗದು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತದೆ’ ಎಂದರು.
‘ಲಕ್ಷಾಂತರ ಶಿಕ್ಷಕರಿಂದ ಗಣತಿ ಮಾಡಿಸಲಾಗಿದೆ. ಮೋಸ ಮಾಡಿ ಎಂದು ಅಷ್ಟೂ ಮಂದಿಗೆ ಸಿಎಂ ಹೇಳಲಾಗುತ್ತದೆಯೇ? ಸಾಕ್ಷಿ– ಆಧಾರವಿಲ್ಲದೇ ಸಿದ್ದರಾಮಯ್ಯ ಗೂಬೆ ಕೂರಿಸುವುದು ತಪ್ಪು’ ಎಂದು ಪ್ರತಿಕ್ರಿಯಿಸಿದರು.
‘ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ತಪ್ಪು. ಖಂಡಿಸಿದ್ದೇವೆ. ಜನಿವಾರವಿರಲಿ, ಹಿಜಾಬ್ ಇರಲಿ ನಮ್ಮ ನಿಲುವು ಒಂದೇ. ಜನಿವಾರ ತೆಗೆಸಿದರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.