ADVERTISEMENT

ಸಂವಿಧಾನ ವಿರೋಧಿಗಳಿಗೆ ಅಧಿಕಾರ ಸಲ್ಲ: ಯತೀಂದ್ರ ಸಿದ್ದರಾಮಯ್ಯ

ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:08 IST
Last Updated 7 ಫೆಬ್ರುವರಿ 2026, 4:08 IST
ಮಾನಸಗಂಗೋತ್ರಿಯಲ್ಲಿ ಶುಕ್ರವಾರ ನಡೆದ ‘ಅಖಿಲ ಕರ್ನಾಟಕ ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿ ಬಳಗ’ದ 8ನೇ ವರ್ಷದ ವಾರ್ಷಿಕೋತ್ಸವವನ್ನು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಂವಿಧಾನ ಪ್ರಸ್ತಾವನೆಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ 
ಮಾನಸಗಂಗೋತ್ರಿಯಲ್ಲಿ ಶುಕ್ರವಾರ ನಡೆದ ‘ಅಖಿಲ ಕರ್ನಾಟಕ ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿ ಬಳಗ’ದ 8ನೇ ವರ್ಷದ ವಾರ್ಷಿಕೋತ್ಸವವನ್ನು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಂವಿಧಾನ ಪ್ರಸ್ತಾವನೆಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ    

ಮೈಸೂರು: ‘ಸಂವಿಧಾನ ಮೌಲ್ಯಗಳಲ್ಲಿ ನಂಬಿಕೆ ಇಟ್ಟವರಿಗೆ ಅಧಿಕಾರ ಕೊಡಬೇಕೆ ಹೊರತು, ಸಂವಿಧಾನ ವಿರೋಧಿಗಳಿಗಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. 

ಮಾನಸಗಂಗೋತ್ರಿಯ ರಾಣಿಬಹದ್ದೂರ್‌ ಸಭಾಂಗಣದಲ್ಲಿ ‘ಅಖಿಲ ಕರ್ನಾಟಕ ಡಾ.ಎಚ್‌.ಸಿ.ಮಹದೇವಪ್ಪ ಅಭಿಮಾನಿಗಳ ಬಳಗ’ವು ಶುಕ್ರವಾರ ಆಯೋಜಿಸಿದ್ದ 8ನೇ ವಾರ್ಷಿಕೋತ್ಸವ ಮತ್ತು ಸಾಧಕರ ಸನ್ಮಾನ ಕಾರ್ಯಾಕ್ರಮ ಉದ್ಘಾಟಿಸಿ ಮಾತನಾಡಿ, ‘ಸಂವಿಧಾನದ ಹೆಸರಿನಲ್ಲೇ ಅಧಿಕಾರ ಪಡೆದವರು ಅದರ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು. 

‘ಈ ಮೊದಲು ಸಂವಿಧಾನ ವಿರೋಧಿಗಳು ಮುಖ್ಯವಾಹಿನಿಯಲ್ಲಿ ಇರಲಿಲ್ಲ. ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತ ತತ್ವಗಳನ್ನು ವಿರೋಧಿಸುವ ಇವರೇ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಜನರು ಹೋರಾಟ ನಡೆಸಬೇಕು’ ಎಂದು ಹೇಳಿದರು.  

ADVERTISEMENT

‘ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ದನಿ ಎತ್ತುವ ನಾಯಕರಿಗೆ ಅಧಿಕಾರ ಕೊಟ್ಟಾಗ ಮಾತ್ರ ಸಂವಿಧಾನದ ಆಶಯಗಳು ಜಾರಿಗೊಳ್ಳುತ್ತವೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಸಮಾಜದಲ್ಲಿ ನೆಲೆಗೊಳ್ಳುತ್ತದೆ’ ಎಂದರು.   

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಯದೇವ ಆಸ್ಪತ್ರೆಯ ಡಾ.ಪಶುಪತಿ, ಜಾನಪದ ಕಲಾವಿದೆ ಗಿರಿಜಮ್ಮ, ಕೊಕ್ಕೊ ಆಟಗಾರ್ತಿ ಚೈತ್ರಾ, ಶಿಲ್ಪ ಕಲಾವಿದ ರಮೇಶ್, ದಸಂಸ ಹೋರಾಟಗಾರ ಗುರುಪ್ರಸಾದ್ ಕೆರೆಗೂಡು, ರೈತ ಕೆ.ಜಿ.ಗೋಪಾಲಯ್ಯ, ಪೌರಕಾರ್ಮಿಕ ಚಿನ್ನಪ್ಪ, ಉದ್ಯಮಿ ಶರಫುದ್ದೀನ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಆರ್.ಸಂಜನಾ ಅವರನ್ನು ಸನ್ಮಾನಿಸಲಾಯಿತು. 

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ವಿಮರ್ಶಕ ಪ್ರೊ.ರಾಜಪ್ಪ ದಳವಾಯಿ, ಪ್ರೊ.ಆನಂದ, ಬಳಗದ ಅಧ್ಯಕ್ಷ ಹಿನಕಲ್ ನಂಜುಂಡ, ಗೌರವಾಧ್ಯಕ್ಷ ಬನ್ನೂರು ಎಂ.ಎನ್.ಸ್ವಾಮಿ, ಕಾರ್ಯಾಧ್ಯಕ್ಷ ಕುರುಬೂರು ಬಸವರಾಜು, ಉಪಾಧ್ಯಕ್ಷ ಕಡಕೊಳ ಭರತ್‌ರಾಜ್, ಪ್ರಧಾನ ಕಾರ್ಯದರ್ಶಿ ಬೆನಕನಹಳ್ಳಿ ನಾಗರಾಜು, ಖಜಾಂಚಿ ದಡದಹಳ್ಳಿ ಮಹದೇವ್, ಕೋಟೆ ಮಂಜುನಾಥ್, ಹುಲ್ಲಹಳ್ಳಿ ಬಾನು, ಬೆನಕನಹಳ್ಳಿ ಹರೀಶ್‌ ಕುಮಾರ್ ಪಾಲ್ಗೊಂಡಿದ್ದರು.   

‘ಬಿಕ್ಕಟ್ಟಿನಲ್ಲಿ ಜೊತೆಯಾಗಿ ನಿಂತರು’ 

‘ತಂದೆ ಸಿದ್ದರಾಮಯ್ಯ ಅವರು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದಾಗೆಲ್ಲ ಡಾ.ಎಚ್‌.ಸಿ.ಮಹದೇವಪ್ಪ ಜೊತೆಯಾಗಿ ನಿಂತಿದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಯಶಸ್ಸಿನಲ್ಲಿ ಮಹದೇವಪ್ಪ ಅವರ ಪಾಲೂ ಇದೆ’ ಎಂದು ಯತೀಂದ್ರ ಶ್ಲಾಘಿಸಿದರು.  

‘ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಿದಾಗ ಡಾ.ಎಚ್‌.ಸಿ.ಮಹದೇವಪ್ಪ ಗಟ್ಟಿಯಾಗಿ ನಿಂತು ಕಾಂಗ್ರೆಸ್‌ಗೆ ಬಂದರು. ಹದಿನಾರು ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ವೈದ್ಯಕೀಯ ಪದವಿ ಪಡೆದು ನಂತರ ರಾಜಕಾರಣಕ್ಕೆ ಬಂದು ಶಾಸಕರು ಸಚಿವರಾಗಿ ಸಾಧನೆ ಮಾಡಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.