ಮೈಸೂರು: ಯೋಗ ನಗರಿ ಎಂದೂ ಖ್ಯಾತವಾಗಿರುವ ಮೈಸೂರಿನಲ್ಲಿ ಸೆ.22ರಿಂದ ‘ಯೋಗ ದಸರಾ’ ಆರಂಭವಾಗಲಿದ್ದು, ‘ಪಂಚತತ್ವ ದರ್ಶನ’ ನೃತ್ಯ ನಾಟಕ ಈ ಬಾರಿಯ ವಿಶೇಷ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಯೋಗ ಸ್ಪರ್ಧೆಯ ಜೊತೆಗೆ ಇದೇ ಮೊದಲ ಬಾರಿ ವಿಚಾರಸಂಕಿರಣ ಹಾಗೂ ಚಾರಣವನ್ನು ‘ಯೋಗ ದಸರಾ ಉಪ ಸಮಿತಿ’ ಆಯೋಜಿಸಿದೆ.
ಸೆ.22ರಂದು ಸಂಜೆ 5ಕ್ಕೆ ಜೆ.ಕೆ.ಮೈದಾನದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಮೃತ ಮಹೋತ್ಸವ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ‘ಯೋಗ ದಸರಾ’ ಉದ್ಘಾಟಿಸುವರು. ಅಲ್ಲಿ ‘ಪಂಚತತ್ವ ದರ್ಶನ’ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಇಲ್ಲಿಯೇ ಸೆ.25ರಂದು ಬೆಳಿಗ್ಗೆ 10ರಿಂದ ‘ಯೋಗ ವೈಜ್ಞಾನಿಕ ವಿಚಾರಸಂಕಿರಣ’ವೂ ನಡೆಯಲಿದೆ.
‘ತುಳಸಿ ರಾಮಚಂದ್ರ ಅವರ ಪರಿಕಲ್ಪನೆ, ಸಂಗೀತ ನಿರ್ದೇಶನದಲ್ಲಿ ನೃತ್ಯಾಲಯದ ಕಲಾವಿದರು ನೃತ್ಯನಾಟಕದ ಪ್ರಸ್ತುತಿಯಿದ್ದು, ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಆಧರಿಸಿ ರೂಪಕವನ್ನು ಅನಾವರಣಗೊಳಿಸಲಿದ್ದಾರೆ’ ಎಂದು ಆಯುಷ್ ಇಲಾಖೆ ಜಿಲ್ಲಾ ಅಧಿಕಾರಿಯೂ ಆದ ಯೋಗ ದಸರಾ ಉಪಸಮಿತಿ ಕಾರ್ಯಾಧ್ಯಕ್ಷೆ ಡಾ.ರೇಣುಕಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯೋಗ ವೈಜ್ಞಾನಿಕ ವಿಚಾರಸಂಕಿರಣವನ್ನು ಇದೇ ಮೊದಲ ಬಾರಿ ಆಯೋಜಿಸಲಾಗಿದೆ. ವೈದ್ಯಕೀಯ ತಜ್ಞರು ಹಾಗೂ ತಂತ್ರಜ್ಞರಾದ ಡಾ.ರಾಜಶೇಖರ ರೆಡ್ಡಿ ಪೊರೆಡ್ಡಿ, ಡಾ.ಸುಬ್ರಹ್ಮಣಿಯಂ, ಪ್ರೊ.ಸದಾಶಿವಗೌಡ, ದೇವಕಿ ಮಾಧವ್ ಅವರು ಯೋಗ ಸಂಬಂಧಿತ ವಿಚಾರಗಳನ್ನು ಮಂಡಿಸುವರು’ ಎಂದರು.
ಯೋಗ ಸ್ಪರ್ಧೆ:
ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಸೆ.27ರಂದು ಬೆಳಿಗ್ಗೆ 9ರಿಂದ ‘ಯೋಗಾಸನ ಸ್ಪರ್ಧೆ’ ನಡೆಯಲಿದ್ದು, ವಿವಿಧ ಜಿಲ್ಲೆಗಳ 1500 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಸ್ಪರ್ಧಿಗಳ ಅಂಕ ಗಳಿಕೆಯನ್ನು ತೋರಿಸಲಾಗುತ್ತಿದೆ. ಎಲ್ಲದರ ಡಿಜಿಟಲ್ ಮೌಲ್ಯಮಾಪನವು ನಡೆಯಲಿದೆ.
‘ದುರ್ಗಾಷ್ಟಮಿಯ ಸೆ.30ರಂದು ಬೆಳಿಗ್ಗೆ 6ರಿಂದ 9ರವರೆಗೆ ಚಾಮುಂಡಿ ಬೆಟ್ಟದ ತಪ್ಪಲಿಂದ ಯೋಗ ಚಾರಣ ಹೊರಡಲಿದೆ. ದೇಗುಲದ ಆವರಣದಲ್ಲಿ ದುರ್ಗಾ ನಮಸ್ಕಾರ’ವನ್ನು ಇದೇ ಮೊದಲ ಬಾರಿ ಆಯೋಜಿಸಲಾಗಿದೆ. ಯೋಗಾಸಕ್ತರು ಗಣನೀಯ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ರೇಣುಕಾದೇವಿ ತಿಳಿಸಿದರು.
ಯೋಗದ ಮಹತ್ವ ತಿಳಿಸಲು ‘ಯೋಗ ದಸರೆ’ಯಲ್ಲಿ ಇದೇ ಮೊದಲ ಬಾರಿ ವಿಚಾರ ಸಂಕಿರಣ ಮತ್ತು ಚಾಮುಂಡಿ ಬೆಟ್ಟಕ್ಕೆ ಯೋಗ ಚಾರಣ ಆಯೋಜಿಸಲಾಗಿದೆ- ಡಾ.ರೇಣುಕಾದೇವಿ, ಉಪಸಮಿತಿ ಕಾರ್ಯಾಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.