ಮೈಸೂರು: ‘ಯುವ ಸಮೂಹ ದೇಶದ ಸಂಪತ್ತು, ಉದ್ಯೋಗ ಪಡೆಯುವ ಕಾಲದಲ್ಲಿ ಅವರಿಗೆ ನೆರವಾಗಲು ಯುವನಿಧಿ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪಿ.ಜಿ ಸೆಮಿನಾರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಯುವನಿಧಿ’ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಯುವನಿಧಿ ಯೋಜನೆಯು ಯುವ ಸಮೂಹಕ್ಕೆ ದಾರಿದೀಪವಾಗಿದ್ದು, ಭವಿಷ್ಯ ರೂಪಿಸಲು ಸಹಕಾರಿಯಾಗಿದೆ. ನಿರುದ್ಯೋಗ ಸಮಸ್ಯೆ ದೊಡ್ಡ ಪಿಡುಗಾಗಿ ಕಾಡುತ್ತಿದ್ದು, ಓದಿಗೆ ಸರಿಯಾದ ಹುದ್ದೆ ಸಿಗದೇ ನಿರುದ್ಯೋಗಿಗಳಾಗುತ್ತಿದ್ದಾರೆ. ಯುವನಿಧಿ ಯೋಜನೆಯ ಹಣ ಬಳಸಿ ಅನೇಕರು ಉದ್ಯೋಗ ಪಡೆದುಕೊಂಡಿದ್ದಾರೆ. ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹಣವನ್ನು ಬಳಸಿರುವ ಉದಾಹರಣೆಗಳಿವೆ’ ಎಂದರು.
‘ದೇಶದ ಪ್ರಗತಿಯನ್ನು ಅಳೆಯಲು ಆ ದೇಶದಲ್ಲಿ ಇರುವ ಮಹಿಳೆಯರ ಪ್ರಗತಿಯಿಂದ ನಿರ್ಧರಿಸಬಹುದು ಎಂದು ಅಂಬೇಡ್ಕರ್ ಹೇಳಿದ್ದರು. ನಮ್ಮ ಸರ್ಕಾರವು ಮಹಿಳೆಯರ ಪರವಾಗಿ ನಿಂತು, ಅವರಿಗಾಗಿ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಅವು ಹೆಣ್ಣು ಮಕ್ಕಳ ಪಾಲಿನ ಬಲಿಷ್ಠ ಶಕ್ತಿಯಾಗಿ ನಿಂತಿದೆ. ಗ್ಯಾರಂಟಿ ಯೋಜನೆಗಳನ್ನು ದಿಕ್ಕರಿಸುತ್ತಿದ್ದ ಪಕ್ಷಗಳೇ, ಇತರೆಡೆಯ ಚುನಾವಣೆಗಳಲ್ಲಿ ನಮ್ಮನ್ನು ಅನುಸರಿಸಿವೆ’ ಎಂದು ಹೇಳಿದರು.
‘ಸರ್ಕಾರವು ಕೌಶಲ ಅಭಿವೃದ್ಧಿ ತರಬೇತಿ ನೀಡಲು ಮುಂದಾಗಿದ್ದು, 40 ರೀತಿಯ ತರಬೇತಿ ನೀಡಲಾಗುತ್ತಿದೆ. ಯುವ ಸಮೂಹ ಇವುಗಳ ಪ್ರಯೋಜನವನ್ನೂ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕಿ ಡಿ.ಎಂ. ರಾಣಿ ಮಾತನಾಡಿ, ‘ಯುವನಿಧಿಗೆ ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಿದ ನಂತರ ಪ್ರತಿ 3 ತಿಂಗಳಿಗೊಮ್ಮೆ 25ನೇ ತಾರಿಕಿನೊಳಗೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಈ ಪ‍್ರಕ್ರಿಯೆ ಮಾಡದಿದ್ದರೆ ಯುವನಿಧಿ ಹಣ ಬರುವುದಿಲ್ಲ’ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷರಾದ ಶಿವಕುಮಾರ್, ಹುಣಸೂರು ಬಸವಣ್ಣ, ಯೋಗೇಶ್, ಪುಷ್ಪಾವತಿ, ಕಾಲೇಜಿನ ಪ್ರಾಂಶುಪಾಲೆ ರಾಜೇಶ್ವರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.