ಮೈಸೂರು: ಯುವ ಮನಸ್ಸುಗಳ ಚಿತ್ತಾರ, ಸಂಭ್ರಮದ ಕ್ಷಣಗಳಿಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರ ಸಜ್ಜಾಗಿದೆ.
ಸೆ. 10ರಿಂದ 17ರವರೆಗೆ ಇಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ದಿನ ಸಂಜೆ 5ರಿಂದ 10ರವರೆಗೂ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರದರ್ಶನದ ಮೂಲಕ ರಂಜಿಸಲಿದ್ದಾರೆ. ಅದಕ್ಕೆಂದೇ ವಿಶೇಷವಾಗಿ ವೇದಿಕೆಯನ್ನು ಸಿಂಗರಿಸಿದ್ದು, ಈ ಮಾರ್ಗಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರವನ್ನೂ ಮಾಡಲಾಗಿದೆ.
300ಕ್ಕೂ ಹೆಚ್ಚು ಕಲಾ ತಂಡಗಳು ಈ ಬಾರಿ ಪ್ರದರ್ಶನ ನೀಡುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಈಗಾಗಲೇ ಅಂತಿಮ ಸಿದ್ಧತೆ ನಡೆಸಿದ್ದಾರೆ. ಪ್ರತಿ ದಿನವೂ 60 ತಂಡಗಳಿಂದ ಪ್ರದರ್ಶನ ಇರಲಿದೆ. ಬುಧವಾರ ಸಂಜೆ 4ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಯುವ ರಾಜಕುಮಾರ್ ಹಾಗೂ ಅಮೃತಾ ಅಯ್ಯಂಗಾರ್ ಭಾಗಿ ಆಗಲಿದ್ದಾರೆ.
ಮೊದಲ ದಿನದಂದು ಉದ್ಘಾಟನಾ ಕಾರ್ಯಕ್ರಮದ ತರುವಾಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ತಂಡದಿಂದ ‘ಸ್ವರ ಭಾರತಿ’ಯೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಬುಧವಾರ 25 ತಂಡಗಳು ಪ್ರದರ್ಶನ ನೀಡಲಿವೆ.
ಪೂರ್ಣ ಹಾಡು ಬಿಡುಗಡೆ: ‘ಯುವ ಸಂಭ್ರಮ’ಕ್ಕೆ ಸ್ಪೂರ್ತಿ ತುಂಬಲು ಸಿದ್ಧಪಡಿಸಿರುವ ವಿಶೇಷ ಥೀಮ್ ಗೀತೆಯ ಬಿಡುಗಡೆ ಕಾರ್ಯಕ್ರಮವು ಸೋಮವಾರ ಸಂಜೆ ಬಿಎಂಎಚ್ ಮಾಲ್ ಆವರಣದಲ್ಲಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.