ADVERTISEMENT

ನೈಸ್‌ ರಸ್ತೆ: ಸವಾರರ ಆಕ್ರೋಶ

ವಾಹನ ಸವಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 5:33 IST
Last Updated 30 ಅಕ್ಟೋಬರ್ 2019, 5:33 IST
ನೈಸ್ ರಸ್ತೆಯ ಗುಂಡಿಗಳು
ನೈಸ್ ರಸ್ತೆಯ ಗುಂಡಿಗಳು   

ಬೊಮ್ಮನಹಳ್ಳಿ: ಟೋಲ್ ಸಂಗ್ರಹಿಸುವ ನೈಸ್ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್) ಸಂಸ್ಥೆಯು, ರಸ್ತೆ ನಿರ್ವಹಣೆಯಲ್ಲಿ ಅಸಡ್ಡೆ ತೋರಿದ್ದು, ಸಂಚರಿಸಲಾಗದಷ್ಟು ಹದಗೆಟ್ಟಿದೆ ಎಂಬ ಅಭಿಪ್ರಾಯ ವಾಹನ ಸವಾರರಿಂದ ವ್ಯಕ್ತವಾಗಿದೆ.

ಹೊಸೂರು ರಸ್ತೆಯಿಂದ ತುಮಕೂರು ರಸ್ತೆವರೆಗೆ ನೈಸ್ ರಸ್ತೆಯಲ್ಲಿ ಉದ್ದಕ್ಕೂ ಪ್ರತಿ ಅರ್ಧ ಕಿ.ಮೀ.ಗೆ ಗುಂಡಿಗಳು ಬಿದ್ದಿವೆ. ಕೆಲವೆಡೆ ರಸ್ತೆ ಕುಸಿದು ಬಿರುಕು ಬಿಟ್ಟಿವೆ. ಇದರಿಂದ ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಇತ್ತೀಚೆಗೆ ರಸ್ತೆ ಗುಂಡಿಗಳಿಂದಾಗಿ ಒಂದೇ ದಿನ ಐದಾರು ಕಾರುಗಳ ಟೈರ್ ಸಿಡಿದು, ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ತಲೆದೋರಿತ್ತು. ಈ ಬಗ್ಗೆ ವಾಹನ ಸವಾರರು ಪ್ರತಿಭಟನೆಯನ್ನೂ ನಡೆಸಿದ್ದರು.

ಭಾರಿ ವಾಹನಗಳ ಸಂಚಾರದ ಒತ್ತಡದಿಂದಾಗಿ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿವೆಯಾದರೂ ವ್ಯವಸ್ಥಿತ ನಿರ್ವಹಣೆ ಇಲ್ಲದ ಕಾರಣ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಲೇನ್‌ಗಳು ಅಳಿಸಿಹೋಗಿವೆ. ದೀಪದೀಪಗಳೂ ಕೆಲಸ ಮಾಡುತ್ತಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಎಲ್ಲಿಯೂ ಕಾಣುವುದಿಲ್ಲ. ಜತೆಗೆ ತುರ್ತು ಕರೆಯ ನಂಬರ್‌ಗಳಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕೆಲ ಸವಾರರು ದೂರುತ್ತಾರೆ.

ADVERTISEMENT

ನೈಸ್ ರಸ್ತೆಯಲ್ಲಿ ರಾತ್ರಿ ಸಂಚಾರ ಅಪಾಯಕಾರಿ ಎಂಬ ದೂರುಗಳು ಕೇಳಿ ಬಂದಿವೆ. ವಾಹನಗಳನ್ನು ಅಡ್ಡಗಟ್ಟಿ ಮೊಬೈಲ್, ಹಣ, ಒಡವೆಗಳನ್ನು ದೋಚಿರುವ ಪ್ರಕರಣಗಳು ನಡೆದಿವೆ ಎಂದು ಕೆಲವರು ದೂರಿದ್ದಾರೆ. ಪುಂಡರು ವ್ಹೀಲಿಂಗ್ ಮಾಡುವುದು ನಡೆಯುತ್ತಿದೆ.

‘ದಿನಕ್ಕೆರಡು ಬಾರಿ ಈ ರಸ್ತೆಯಲ್ಲಿ ಸಂಚರಿಸುತ್ತೇನೆ. ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ರಾತ್ರಿ ವೇಳೆ ಗಾಡಿ ಓಡಿಸಲು ಭಯವಾಗುತ್ತದೆ, ದೂಳು ಕಣ್ಣಿಗೆ ಹೊಡೆಯುತ್ತದೆ’ ಎನ್ನುತ್ತಾರೆ ಐಟಿ ಉದ್ಯೋಗಿ ನವೀನ್ ಮುದನೂರು.

‘ನೈಸ್ ವಸೂಲಿಬಾಜಿಗೆ ಇಳಿದಿದೆ. ಕಾರಿನಲ್ಲಿ 80 ಕಿ.ಮೀ. ವೇಗದಲ್ಲೂ ಹೋಗಲಾದ ಸ್ಥಿತಿಯಲ್ಲಿ ಈ ರಸ್ತೆ ಇದೆ. ಕೇವಲ 9 ಕಿ.ಮೀ.ಗೆ ₹40 ಟೋಲ್ ನೀಡಿ ಕೆಟ್ಟರಸ್ತೆಯಲ್ಲಿ ಸಂಚರಿಸಬೇಕೇ? ರಾಜ್ಯ ಸರ್ಕಾರ ಮೌನ ವಹಿಸಿರುವುದು ಏಕೆ’ ಎಂದು ವಾಹನ ಸವಾರ ಕಂದಸ್ವಾಮಿ ಪ್ರಶ್ನಿಸಿದರು.

ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರು ಕೆಲವು ದಿನಗಳ ಹಿಂದೆ ರಸ್ತೆ ಅವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಗುಂಡಿ ಮುಚ್ಚಲು ಗಡುವು ವಿಧಿಸಿದ್ದರು. ಆ ಬಳಿಕವೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ ಎಂದು ವಾಹನ ಸವಾರರು ದೂರಿದರು.

ನೈಸ್ ಸಂಸ್ಥೆಯು ಸರ್ಕಾರದ ಜತೆಗಿನ ಒಪ್ಪಂದದಂತೆ ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕಿತ್ತು. ಬದಲಿಗೆ ಡಾಂಬರ್ ರಸ್ತೆ ನಿರ್ಮಾಣ ಮಾಡಿದೆ’ ಎಂದು ನೈಸ್ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿಯು ವರದಿಯಲ್ಲಿ ತಿಳಿಸಿತ್ತು. ಹೆಚ್ಚುವರಿ ಭೂಸ್ವಾಧೀನ, ಕಾನೂನುಬಾಹಿರ ಕಲ್ಲು ಗಣಿಗಾರಿಕೆ ಇತ್ಯಾದಿ ಗಂಭೀರ ಲೋಪಗಳನ್ನು ಉಲ್ಲೇಖಿಸಿದ್ದ ಸಮಿತಿಯು, ಸಿಬಿಐ ತನಿಖೆಗೂ ಶಿಫಾರಸು ಮಾಡಿತ್ತು.

ಶೀಘ್ರ ರಸ್ತೆ ದುರಸ್ತಿ: ನೈಸ್‌

‘ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತದೆ. ಈ ವರ್ಷ ಜೂನ್‌–ಜುಲೈ ತಿಂಗಳಲ್ಲಿ ಮಳೆ ಬರಲಿಲ್ಲ. ಆಗಸ್ಟ್‌ನಲ್ಲಿ ಜೋರು ಮಳೆ ಬಂತು. ಇದರಿಂದಾಗಿ, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ರಸ್ತೆ ದುರಸ್ತಿ ಕಾರ್ಯ ಆರಂಭಿಸಿದ್ದೇವೆ. ಆದರೆ, ಆಗಾಗ ಮಳೆ ಬರುತ್ತಿರುವುದರಿಂದ ಅಡ್ಡಿಯಾಗಿದೆ. ಮಳೆ ನಿಂತ ಕೂಡಲೇ ಸಮರೋಪಾದಿಯಲ್ಲಿ ಕಾಮಗಾರಿ ನಡೆಸಿ ಸವಾರರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ನೈಸ್‌ ವಕ್ತಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.