ADVERTISEMENT

‘ಮಿನಿ ವಿಧಾನಸೌಧ’ ಹೆಸರು ಬದಲಾವಣೆ: ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 13:25 IST
Last Updated 2 ಸೆಪ್ಟೆಂಬರ್ 2021, 13:25 IST
ಕಂದಾಯ ಸಚಿವ ಆರ್‌.ಅಶೋಕ್‌
ಕಂದಾಯ ಸಚಿವ ಆರ್‌.ಅಶೋಕ್‌   

ಚಿತ್ರದುರ್ಗ: ಮಿನಿ ವಿಧಾನಸೌಧ ಎಂಬ ಹೆಸರಿನಲ್ಲಿ ‘ಮಿನಿ’ ಎಂಬ ಇಂಗ್ಲಿಷ್‌ ಪದವಿದೆ. ಇದಕ್ಕೆ ಸಾಹಿತ್ಯ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಹೆಸರಿನ ಬದಲಾವಣೆಯ ಬಗ್ಗೆ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕು ಕಚೇರಿಯ ಕಟ್ಟಡಗಳಿಗೆ ಮಿನಿ ವಿಧಾನಸೌಧ ಎಂಬ ನಾಮಕರಣ ಮಾಡಲಾಗಿದೆ. ಅನೇಕ ಸಾಹಿತಿಗಳು ಇಂಗ್ಲಿಷ್‌ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ತಾಲ್ಲೂಕು ಆಡಳಿತ ಸೌಧ ಎಂಬ ಕನ್ನಡ ಹೆಸರು ಇಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಶೀಘ್ರ ಆದೇಶ ಹೊರಬೀಳಲಿದೆ ’ ಎಂದು ಮಾಹಿತಿ ನೀಡಿದರು.

‘ರಾಜ್ಯದ 9 ಲಕ್ಷ ಹೆಕ್ಟೇರ್‌ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ವ್ಯಾಜ್ಯ ನಡೆಯುತ್ತಿದೆ. ಈ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಆರು ಲಕ್ಷ ಹೆಕ್ಟೇರ್‌ ಡೀಮ್ಡ್‌ ಅರಣ್ಯವನ್ನು ಕಂದಾಯ ಇಲಾಖೆಗೆ ಒಪ್ಪಿಸುವ ಒಡಂಬಡಿಕೆ ಆಗಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ನೀಡಲು ಅನುಕೂಲವಾಗಲಿದೆ. ಉಳುಮೆ ಮಾಡುವವರಿಗೆ ಭೂಮಿ ಸಿಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಂತೆ ಸೂಚನೆ ನೀಡಲಾಗುವುದು. ಸಮಿತಿಯ ತೀರ್ಮಾನದಂತೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಲಂಬಾಣಿ ತಾಂಡ, ಕುರುಬರ ಹಟ್ಟಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲೆಡೆ ಇರುವ ಹಟ್ಟಿ, ಹಾಡಿ, ತಾಂಡಗಳಿಗೆ ಗ್ರಾಮದ ಮಾನ್ಯತ ಸಿಗಲಿದೆ’ ಎಂದರು.

‘ಉಪನೋಂದಣಾಧಿಕಾರಿ ಕಚೇರಿಯ ತಂತ್ರಾಂಶವನ್ನು 2014ರಲ್ಲಿ ಮೇಲ್ದರ್ಜೆಗೆ ಏರಿಸಬೇಕಿತ್ತು. ಆ ಸಂದರ್ಭದಲ್ಲಿ ಇದರ ಕಡೆ ಗಮನ ಹರಿಸಿಲ್ಲ. ಹೀಗಾಗಿ, ಆಸ್ತಿ ನೋಂದಣಿ ಸಂದರ್ಭದಲ್ಲಿ ಸರ್ವರ್‌ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೊಸ ತಂತ್ರಜ್ಞಾನ ಒದಗಿಸಲು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಒಪ್ಪಿಕೊಂಡಿದೆ. ಬ್ಯಾಟರಿ ಹಾಗೂ ಇತರ ಪರಿಕರಗಳ ನಿರ್ವಹಣೆಗೆ ₹ 12 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.