ADVERTISEMENT

ಅಂಗವಿಕಲ ಮಕ್ಕಳ ಏಳ್ಗೆಗೆ ಉತ್ಸುಕತೆ ಅವಶ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 5:10 IST
Last Updated 10 ನವೆಂಬರ್ 2012, 5:10 IST

ರಾಯಚೂರು: ಅಂಗವಿಕಲ ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರವು ಹಲವಾರು ಯೋಜನೆ ರೂಪಿಸಿದೆ. ಅವುಗಳ ನೆರವಿನಿಂದ ಮಕ್ಕಳ ಏಳ್ಗೆಗೆ ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ತಾತ್ಸಾರ ಮನೋಭಾವ ಬೇಡ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ ಹೇಳಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಬೆಂಗಳೂರಿನ ಸೇವಾ ಇನ್ ಆ್ಯಕ್ಷನ್ ಎನ್‌ಟಿಎಸಿಟಿ ಸಂಯುಕ್ತ ಆಶ್ರಯದಲ್ಲಿ ನೂನ್ಯತೆಯುಳ್ಳ ವ್ಯಕ್ತಿಗಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಮನ್ವಯತೆ ಕುರಿತು ಜನಜಾಗೃತಿ-2012ರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ವಶಿಕ್ಷಣ ಅಭಿಯಾನದ ಅಧಿಕಾರಿ ಚಂದ್ರಶೇಖರ ಭಂಡಾರಿ ಮಾತನಾಡಿ, ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು ಎಂದು ಹೇಳಿದರು.

ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ 6,662 ಮಕ್ಕಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಮಕ್ಕಳಿಗೆ 3ಸಾವಿರ ರೂಪಾಯಿ ಕರ್ಚಿನಲ್ಲಿ ಸಮನ್ವಯ ಶಿಕ್ಷಣ ಸೌಲಭ್ಯ ಕಲ್ಪಿಸಿ ಮುಖ್ಯ ವಾಹಿನಿಗೆ ತರಲು  ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.

ಬೆಂಗಳೂರಿನ ಸೇವಾ ಇನ್ ಆ್ಯಕ್ಷನ್ ಸಂಸ್ಥೆಯ ಶ್ರೀನಿವಾಸ ಪ್ರಾಸ್ತವಿಕವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ರಿಮ್ಸನ ಮಾನಸಿಕ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ ಬಾಬು ವಹಿಸಿದ್ದರು. ದೇವದುರ್ಗದ ಸಮೂಹ ಸಾಮರ್ಥ್ಯ ಸಂಸ್ಥೆಯ ಬಾಬುಮಿಯಾ, ಜಿಲ್ಲಾಅಂಗವಿಕಲರ ಒಕ್ಕೂಟದ ಅಧ್ಯಕ್ಷ ದೇಸಾಯಿ ದೋತ್ತರಬಂಡಿ, ಜೀವನ್, ಎಂ.ಡಿ ಹುಸೇನ್, ಸಂಗಮೇಶ ಕೋರಿ, ಸುಧಾಕರ್ ಉಪಸ್ಥಿತರಿದ್ದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶೇಖ್ ಎಂ.ಅಸರಾರ್ ಸ್ವಾಗತಿಸಿದರು. ವೀರೇಶ ನಿರೂಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.