ರಾಯಚೂರು: ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೆ ರಾಯಚೂರು ಜಿಲ್ಲೆಯಲ್ಲಿ 47,000 ಅರ್ಜಿ ಸಲ್ಲಿಕೆ ಆಗಿದೆ. ಎಲ್ಲ ಅರ್ಜಿಗಳನ್ನೂ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಜಿಲ್ಲೆಯಾದ್ಯಂತ 25 ಚೆಕ್ ಪೋಸ್ಟ್ ಹಾಕಲಾಗಿದೆ. ಪೊಲೀಸರು ಹಗಲು ರಾತ್ರಿ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಎನ್ ನಾಗರಾಜು ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ ಜಿಲ್ಲೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಲಿಂಗಸುಗೂರು ತಾಲ್ಲೂಕು ಅಮರೇಶ್ವರ ಜಾತ್ರೆಯಲ್ಲಿ ಫ್ಲೆಕ್ಸ್ ಹಾಕಿದ್ದ ಕಾರಣಕ್ಕೆ ಬಿಜೆಪಿ ಪಕ್ಷದ ವಿರುದ್ಧ ಹಾಗೂ ರಾಯಚೂರಿನಲ್ಲಿ ಪ್ರಚಾರ ಸಭೆಗೆ ಊಟಕ್ಕೆ ಅಡುಗೆ ಮಾಡಿಸಿದ್ದರ ಕುರಿತು ಬಿಜೆಪಿ ಪಕ್ಷದ ವಿರುದ್ಧ ಪ್ರಕರಣ ದಾಖಲಾಗಿವೆ.
ಮುದಗಲ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಹಿಡಿಯಲು ಯತ್ನಿಸಿದಾಗ ಅಕ್ರಮದ ಮದ್ಯದ 5 ಬಾಕ್ಸ್ ಬಿಟ್ಟು ಪರಾರಿಯಾದ ಪ್ರಕರಣ ಲಿಂಗಸುಗೂರು ತಾಲ್ಲೂಕು ಮುದಗಲ್ ಹತ್ತಿರ ವರದಿಯಾಗಿದೆ ಎಂದು ಹೇಳಿದರು.
ಅಂತರರಾಜ್ಯ ಸೇರಿದಂತೆ 25 ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಪೊಲೀಸರು, ಕಂದಾಯ, ವಾಣಿಜ್ಯ ಇಲಾಖೆ ಸಿಬ್ಬಂದಿ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣ, ವ್ಯವಹಾರ, ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ಸಹಕಾರಿ ಬ್ಯಾಂಕ್‌ಗಳೂ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಚುನಾವಣಾ ಆಯೋಗದ ನಿರ್ದಿಷ್ಟ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಮಾಹಿತಿ ಒದಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮತದಾನ ಜಾಗೃತಿಗೆ ಒತ್ತು: ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿಗೆ ಸ್ವೀಪ್ ಸಮಿತಿಗಳ ಮೂಲಕ ಜಾಗೃತಿ ಕೆಲಸ ಮಾಡಲಾಗುತ್ತಿದೆ. ಸಂಘ ಸಂಸ್ಥೆ, ನೌಕರರು, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳ ಮೂಲಕ ಜಾಗೃತಿ ಜಾಥಾ, ಕಾರ್ಯಕ್ರಮ ನಡೆಸಿ ಜಾಗೃತಿ ಮಾಡಲಾಗುತ್ತಿದೆ ಎಂದರು.
ಹಿಂದಿನ ಚುನಾವಣೆಯಲ್ಲಿ ಕನಿಷ್ಠ ಮತದಾನ ಆಗಿರುವ ಪ್ರದೇಶದಲ್ಲಿ ಜಾಗೃತಿಗೆ ಒತ್ತು ನೀಡಲಾಗಿದೆ. ಚುನಾವಣಾ ಆಯೋಗವೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಕಡೆಗಳಲ್ಲಿ ಜಾಗೃತಿ ಮೂಡಲಾಗುತ್ತದೆ. ಲೋಕಸಭಾ ಕ್ಷೇತ್ರದಲ್ಲಿ 70 ಕಡೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.