ADVERTISEMENT

ಅಕ್ರಮ ಮರಳು ಸಾಗಣೆ: 6 ಟಿಪ್ಪರ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 8:52 IST
Last Updated 9 ಅಕ್ಟೋಬರ್ 2017, 8:52 IST
ಪರವಾನಗಿಗಿಂತ ಹೆಚ್ಚುವರಿ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳನ್ನು ಲಿಂಗಸುಗೂರು ಪೊಲೀಸರು ಭಾನುವಾರ ವಶಕ್ಕೆ ಪಡೆದರು
ಪರವಾನಗಿಗಿಂತ ಹೆಚ್ಚುವರಿ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳನ್ನು ಲಿಂಗಸುಗೂರು ಪೊಲೀಸರು ಭಾನುವಾರ ವಶಕ್ಕೆ ಪಡೆದರು   

ಲಿಂಗಸುಗೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನಿಂದ ಬಾಗಲಕೋಟೆ ಜಿಲ್ಲೆಗೆ ಪರವಾನಗಿ ಪಡೆದು ಹೆಚ್ಚುವರಿ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ಆರು ಟಿಪ್ಪರ್‌ಗಳನ್ನು ತಾಲ್ಲೂಕಿನ ಯಲಗಲದಿನ್ನಿ ಬಳಿ ಪೊಲೀಸರು ಜಪ್ತಿ ಮಾಡಿ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಧಿಕೃತವಾಗಿ ಕೇವಲ 13 ರಿಂದ 14 ಟನ್‌ ಪರವಾನಿಗೆ ಪಡೆದಿದ್ದು 20ಕ್ಕೂ ಹೆಚ್ಚು ಟನ್‌ ಮರಳು ಅಕ್ರಮ ಸಾಗಣೆ ಮಾಡುತ್ತಿರುವುದು ದೃಢಪಟ್ಟಿದೆ. ಟಿಪ್ಪರ್‌ ಚಾಲಕರನ್ನು ಬಂಧಿಸಲಾಗಿದೆ.

ಟಿಪ್ಪರ್‌ ಚಾಲಕರು ಮತ್ತು ಮಾಲೀಕರ ಮೇಲೆ ಪರವಾನಿಗೆಗಿಂತ ಹೆಚ್ಚುವರಿ ಮರಳು ಅಕ್ರಮ ಸಾಗಣೆ ಮಾಡಿದ ಕುರಿತು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಪರವಾನಿಗೆಗಿಂತ ಹೆಚ್ಚುವರಿ ಪ್ರಮಾಣದ ಮರಳು ಅಕ್ರಮ ಸಾಗಣೆಗೆ ಲೊಕೋಪಯೋಗಿ ಇಲಾಖೆ ಅಧಿಕಾರಿಗಳ ಪರೋಕ್ಷ ಬೆಂಬಲ ಇರುವುದು ದೃಢಪಟ್ಟಿದೆ. ಅಕ್ರಮ ದಂಧೆಗೆ ಸಹಕರಿಸಿದ ಅಧಿಕಾರಿಗಳ ಮೇಲೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಆಗ್ರಹಪಡಿಸಿದ್ದಾರೆ.

ಡಿವೈಸ್ಪಿ ಎಸ್‌.ಎಚ್‌. ಸುಬೇದಾರ ಮಾರ್ಗದರ್ಶನದಲ್ಲಿ ಸಿಪಿಐ ವಿ.ಎಸ್‌. ಹಿರೇಮಠ, ಪಿಎಸ್‌ಐ ದಾದಾವಲಿ ಕೆ.ಎಚ್‌ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.