ರಾಯಚೂರು: ಅಕ್ರಮವಾಗಿ ಸಿಎಚ್ ಪೌಡರ್ ಕರ್ನಾಟಕ ರಾಜ್ಯ ಪೂರೈಕೆಯಾಗದಂತೆ ಚೆಕ್ ಪೋಸ್ಟ್‌ಗಳ ಸ್ಥಾಪನೆ ಮಾಡಲಾಗಿದೆ. ಸಿಎಚ್ ಪೌಡರ್ ಸಾಗಿಸದಂತೆ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ಆಂಧ್ರಪ್ರದೇಶ ರಾಜ್ಯದ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆ ಡಿ.ಕೆ ಅರುಣ ಭರತಸಿಂಹರೆಡ್ಡಿ ಹೇಳಿದರು.
ಇಲ್ಲಿನ ರಾಜೇಂದ್ರ ಗಂಜ್ ಆವರಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಅಕ್ರಮವಾಗಿ ಸಿಎಚ್ ಪೌಡರ್ ಪೂರೈಕೆಯಾಗದಂತೆ ಕ್ರಮ ತೆಗೆದುಕೊಂಡಿದೆ. ಆದರೆ, ರೈಲುಗಳ ಮಾರ್ಗವಾಗಿ ಪೂರೈಕೆಯಾಗುತ್ತಿರುವ ಬಗ್ಗೆಯೂ ಈಚೆಗೆ ತಮ್ಮ ಗಮನಕ್ಕೆ ಬಂದಿದೆ. ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜುರಾಲಾ(ಪ್ರಿಯದರ್ಶಿನ ಜುರಾಲಾ ಯೋಜನೆ)ಜಲಾಶಯ ಒಟ್ಟು 15 ಟಿಎಂಸಿ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸುವುದರಿಂದ ಜುರಾಲಾ ಜಲಾಶಯಕ್ಕೆ ಸಮೀಪದಲ್ಲಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಕೆಲ ಹಳ್ಳಿಗಳು ಮುಳುತ್ತವೆ. ಸಂಗ್ರಹಗೊಂಡ ಹಿನ್ನೀರನ್ನು ಕರ್ನಾಟಕ ರಾಜ್ಯ ಪಡೆದುಕೊಂಡರೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದರು.
ಹಿಂದೆ ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಸರ್ಕಾರದ ಮಧ್ಯ ಒಪ್ಪಂದದ ಪ್ರಕಾರ ಜುರಾಲಾ ಜಲಾಶಯದ ಹತ್ತಿರ ಇರುವ ಜಲ ವಿದ್ಯುತ್ ಘಟಕದಿಂದ ಕರ್ನಾಟಕಕ್ಕೆ ಒಪ್ಪಂದದ ಪ್ರಕಾರ ವಿದ್ಯುತ್ ಪೂರೈಕೆಗೆ ಆಂಧ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಆಂಧ್ರಪ್ರದೇಶ ರಾಜ್ಯ ಜುರಾಲಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆಯುತ್ತಿಲ್ಲ. ಪ್ರವಾಹ ಹಾಗೂ ಮಳೆಯಿಂದ ಹೆಚ್ಚಾದ ನೀರನ್ನು ಮಾತ್ರ ಪಡೆಯಲಾಗುತ್ತಿದೆ. ಜುರಾಲಾ ಜಲಾಶಯದ ವ್ಯಾಪ್ತಿಯಲ್ಲಿ 85 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಆದರೂ ಕೆಳ ಭಾಗದ ರೈತರಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯದ ಹೂಳು ಎತ್ತುವ ಬಗ್ಗೆ ನಮ್ಮ ಸರ್ಕಾರ ನೀರಾವರಿ ಖಾತೆ ಹಾಗೂ ಕರ್ನಾಟಕ ರಾಜ್ಯದ ನೀರಾವರಿ ಖಾತೆ ಸಚಿವರು ಚರ್ಚಿಸಿ ನಡೆಸಬೇಕು. ಗಿಲ್ಲೆಸುಗೂರು ಗ್ರಾಮದ ಹತ್ತಿರುವ ಆರ್‌ಡಿಎಸ್ ಜಲಾಶಯದ ಅಭಿವೃದ್ಧಿಗಾಗಿ ಆಂಧ್ರಪ್ರದೇಶ ಸರ್ಕಾರ 120 ಕೋಟಿ ಬಿಡುಗಡೆ ಮಾಡಿದೆ. ಉತ್ತಮ ಕಾಮಗಾರಿ ನಿರ್ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಂಡಿದೆ. ಆರ್‌ಡಿಎಸ್ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆಯುವುದರಿಂದ ಆಂಧ್ರ ಪ್ರದೇಶಕ್ಕೆ ನೀರಿನ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.