ADVERTISEMENT

ಅಕ್ರಮ ಸೇತುವೆ ತೆರವಿಗೆ ಆದೇಶ

ಜಿಲ್ಲಾಧಿಕಾರಿ ನಾಗರಾಜು ಭೇಟಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:30 IST
Last Updated 7 ಡಿಸೆಂಬರ್ 2013, 6:30 IST

ದೇವದುರ್ಗ: ತಾಲ್ಲೂಕಿನ ಕೋಣ­ಚಪ್ಪಳ್ಳಿ ಗ್ರಾಮದ ಮುಂದೆ ಹರಿಯುವ ಕೃಷ್ಣಾ ನದಿಯಿಂದ ಮರಳು ಸಾಗಾಣಿಕೆಗೆ ಪರವಾನಗಿ ಪಡೆದ ಗುತ್ತೆಗೆದಾರರು ನದಿಯಲ್ಲಿ ಕಾನೂನು ಬಾಹಿರ ಸೇತುವೆ ನಿರ್ಮಾಣ ಮಾಡಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಎಸ್‌.ಎನ್‌. ನಾಗರಾಜು ಲೋಕೋಪ­ಯೋಗಿ ಇಲಾಖೆ ಸಹಾಯಕ ಎಂಜಿನಿ­ಯರ್‌ ಭೀಮರೆಡ್ಡಿ ಅವರಿಗೆ ತಾಕೀತು ಮಾಡಿದರು.

ನದಿಯಲ್ಲಿ ಮರಳು ಸಾಗಾಣಿಕೆಗೆ ನಿರ್ಮಿಸಿರುವ ಸೇತುವೆಯನ್ನು ಶುಕ್ರ­ವಾರ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಮರಳು ಸಾಗಾಣಿಕೆಗೆ ಇಷ್ಟು ದೊಡ್ಡ ಸೇತುವೆ ನಿರ್ಮಿಸಿರುವುದು ಗಮನಕ್ಕೆ ಬಂದಿರಲಿಲ್ಲ. ಇಂಥ ಸೇತುವೆ ನಿರ್ಮಾಣ ಕಾನೂನು ಬಾಹಿರ. ಒಬ್ಬರ ಲಾಭಕ್ಕೆ ನೆಲ, ಜಲವನ್ನು ಬಲಿ ನೀಡುವುದು ಕಾನೂನು ಬಾಹಿರವಾಗಿದೆ. ಕೂಡಲೇ ಸೇತುವೆ ತೆರವುಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಭೀಮರೆಡ್ಡಿ ಆದೇಶ ಮಾಡಿದರು.

ನದಿಯಲ್ಲಿ ಸೇತುವೆ ನಿರ್ಮಾಣ ಮಾಡಿರುವುದನ್ನು ಇಲಾಖೆ ಅಧಿಕಾರಿ­ಗಳು ನನ್ನ ಗಮನಕ್ಕೆ ಯಾಕೆ ತರಲಿಲ್ಲ. ಕೂಡಲೇ ಸೇತುವೆ ತೆರವಿಗೆ ಕ್ರಮ ಕೈಗೊಳ್ಳುವಂತೆ ಲೋಕೋಪ­ಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಅವರಿಗೆ ಜಿಲ್ಲಾಧಿಕಾರಿ  ಆಕ್ರೋಶ ವ್ಯಕ್ತಪಡಿಸಿದರು. ಕಳ್ಳ ಸಾಗಾಣಿಕೆಗೆ ಮಾಡಿಕೊಂಡ ಸೇತುವೆ ಇದಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ನಿರ್ಮಿಸಿಕೊಂಡ ಸೇತುವೆ ಮೇಲೆ ಮರಳು ಸಾಗಾಣಿಕೆ ಮಾಡತಕ್ಕದ್ದಲ್ಲ. ಆದೇಶವನ್ನು ಮೀರಿಯೂ ಸಾಗಾಣಿಕೆಗೆ ಮುಂದಾದರೆ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಜುಲೈ 8, 2013ರಂದು ಉಪ ಜಿಲ್ಲಾಧಿಕಾರಿ ನೀಡಿದ ಆದೇಶವನ್ನು ಗುರುವಾರ ವಾಪಸ್‌ ಪಡೆಯಲಾಗಿದೆ ಎಂದು ತಿಳಿಸಿದು.

ಮರಳು ಸಾಗಾಣಿಕೆ ಮಾಡಲು ನದಿಯಲ್ಲಿ ಸೇತುವೆ ನಿರ್ಮಾಣಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಶಿಫಾರಸು ಪತ್ರ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿ­ಗಳು ಇದಕ್ಕೆ ಬೆಂಬಲ  ನೀಡಿರುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಎಲ್ಲ ಮಾಹಿತಿಯನ್ನು ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ನೋಟಿಸ್‌: ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಸ್ಥಳೀಯ ಲೋಕೋಪ­ಯೋಗಿ ಇಲಾಖೆ ಸಹಾಯಕ ಎಂಜಿನಿ­ಯರ್‌ ಅವರ ನಿರ್ಲಕ್ಷ್ಯ ಕಂಡು ಬಂದಿದೆ. ಅವರ ವಿರುದ್ಧ ಕೂಡಲೇ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಪತ್ರ ಬರೆಯಲಾಗುವುದು. ಕಂದಾಯ ಇಲಾಖೆಯಿಂದ ನೋಟಿಸ್‌ ಜಾರಿಗೊಳಿಸಲಾಗುವುದು ಎಂದರು.

ಮನವಿ: ನದಿಯಲ್ಲಿ ನಿರ್ಮಿಸಿದ ಸೇತುವೆಯನ್ನು ತೆರವುಗೊಳಿಸಿದ ನಂತರ ಮರಳು ಸಾಗಾಣಿಕೆಗೆ ಕೆಲವು ಗ್ರಾಮಗ­ಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು,  ನಮಗೆ ಪೊಲೀಸ್‌ ಬಂದೋಬಸ್ತ್‌ ನೀಡ­ಬೇಕೆಂದು ಗುತ್ತಿಗೆದಾರ ದೇವಿಂದ್ರಪ್ಪ ಚಿಕ್ಕಬೂದೂರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ತಹಶೀಲ್ದಾರ್‌ ಬಸಲಿಂಗಪ್ಪ ನೈಕೋಡಿ, ಗುತ್ತಿಗೆದಾರ  ವಿ.ಎಂ.ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.