ADVERTISEMENT

ಅನಾಹುತಕ್ಕೆ ಆಹ್ವಾನ: ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:35 IST
Last Updated 5 ಅಕ್ಟೋಬರ್ 2012, 5:35 IST

ರಾಯಚೂರು: ನಗರದ ರೈಲ್ವೆ ಸ್ಟೇಶನ್ ರಸ್ತೆ ಸದಾ ವಾಹನ ಸಂಚಾರದಿಂದ ಗಿಜಿಗಿಡುವ ರಸ್ತೆ. ಈ ರಸ್ತೆಯ ಪಕ್ಕ ಇರುವ ಸೇಂಟ್ ಮೆರಿ ಕಾನ್ವೆಂಟ್ ಎದುರು ಬೃಹತ್ ಗುಂಡಿ ಬಿದ್ದು ಕೆಲ ತಿಂಗಳಾಗಿದ್ದು, ಈಗ ಆ ಗುಂಡಿ ಚಿಕ್ಕ ಕೆರೆಯಂತೆ ಗೋಚರಿಸುತ್ತಿದೆ!

ನಿತ್ಯ ದ್ವಿಚಕ್ರ ವಾಹನ ಸವಾರರು ಎದ್ದು ಬಿದ್ದು ಈ ರಸ್ತೆಯಲ್ಲಿ ಸಾಗುವುದು ಸಾಮಾನ್ಯ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಬದಿ ಸೆಂಟ್ ಮೇರಿ ಕಾನ್ವೆಂಟ್ ಶಾಲೆ ಇದೆ. ಸಾವಿರಾರು ಪುಟಾಣಿ ಮಕ್ಕಳು ನಿತ್ಯ ಶಾಲೆ ಒಳಗೆ ಹೋಗುವಾಗ ಮತ್ತು ಹೊರಗೆ ಬರುವಾಗ ಈ ಗುಂಡಿ ಬಿದ್ದ ರಸ್ತೆಯನ್ನು ದಾಟಿಕೊಂಡೇ ಹೋಗಬೇಕು. ಎಷ್ಟೋ ಮಕ್ಕಳು ಮತ್ತು ಪಾಲಕರು ಕಾಲು ಜಾರಿ ಬಿದ್ದು ರಾಡಿ ಮೆತ್ತಿಸಿಕೊಂಡಿದ್ದಾರೆ ರಸ್ತೆ ಪಕ್ಕ ಇರುವ ಅಂಗಡಿಯವರು ಹೇಳುತ್ತಾರೆ.

ಒಂದು ಕಾನ್ವೆಂಟ್ ಶಾಲೆ ಇದ್ದರೆ ಮತ್ತೊಂದು ಬದಿ ಪೆಟ್ರೋಲ್ ಬಂಕ್ ಇದೆ. ಬಂಕ್ ಇರುವುದರಿಂದ ವಾಹನ ಸಂಖ್ಯೆ, ಸಂಚಾರ ಇನ್ನೂ ಹೆಚ್ಚು. ಭಾರಿ ವಾಹನಗಳು ಯಮಧೂತನಂತೆ ಬಂದು ಹಠಾತ್ ಈ ಗುಂಡಿ ಕಂಡು ಧಡಕ್ ಎಂದು ನಿಲ್ಲುತ್ತವೆ. ಗುಂಡಿಯಲ್ಲಿದ್ದ ಕೊಚ್ಚೆ ನೀರು ಪಾದಚಾರಿ, ದ್ವಿಚಕ್ರವಾಹನ ಸವಾರರು, ಶಾಲಾ ಮಕ್ಕಳಿಗೆ ಸಿಡಿಯುವುದು ನಿತ್ಯ ಕಾಣುವ ದೃಶ್ಯ.

ಇದು ಕೇವಲ ಒಂದು ದಿನ, ಒಂದು ತಿಂಗಳದ ಮಾತಲ್ಲ. ಅನೇಕ ತಿಂಗಳುಗಳಿಂದ ಈ ಸ್ಥಿತಿ ಇದೆ. ರಸ್ತೆ ಮೊದಲು ಇದ್ದ ಒಂದು ಗುಂಡಿ ಹೋಗಿ ಈಗ ಹತ್ತಾರು ಗುಂಡಿಗಳು ಬಿದ್ದಿವೆ. ಆದರೆ, ಈ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರು ಮಾತ್ರ ಕಣ್ತೆರೆದು ನೋಡಿಲ್ಲ!

ಲೋಕೋಪಯೋಗಿ ಇಲಾಖೆಯೇ ಈ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನಗರಸಭೆಯೂ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದೆ. ಆದರೆ, ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ `ಪ್ರಜಾವಾಣಿ~ಗೆ ತಿಳಿಸಿದರು.

ಮಂತ್ರಾಲಯ, ಆದೋನಿ, ಕರ್ನೂಲ್‌ಗೆ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯಲ್ಲಿ ನಿತ್ಯ ಸಾರಿಗೆ ಸಂಸ್ಥೆ ಬಸ್, ರೈಲ್ವೆ ಸ್ಟೇಷನ್‌ನಿಂದ ಗೂಡ್ಸ್ ವಾಹನಗಳು, ಭಾರಿ ವಾಹನಗಳು, ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಏನಾದರೂ ಅಪಘಾತ ಸಂಭವಿಸಿದರೆ ಯಾರು ಹೊಣೆ? ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇನ್ನಾದರೂ ಕಣ್ತೆರೆದು ನೋಡಬೇಕಿದೆ ಎಂದು ಅಂಗಡಿ ಮಾಲೀಕರು ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.