ADVERTISEMENT

ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 10:16 IST
Last Updated 19 ಜೂನ್ 2013, 10:16 IST

ಸಿಂಧನೂರು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.

ಶಿಬಿರವನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೈಯದ್ ಹಸನ್ ಹುಸೇನ, ಕಳೆದ ಒಂದು ವರ್ಷದಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಈ ಶಿಬಿರ ನಡೆಸಲಾಗುತ್ತಿದೆ ಎಂದರು.

584 ಅಂಗನವಾಡಿ ಕೇಂದ್ರ ಹಾಗೂ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ವೈದ್ಯಾಧಿಕಾರಿಗಳು ತಪಾಸಣೆ ಮಾಡಿದ್ದು ಮಕ್ಕಳ ತಜ್ಞರಿಂದ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತಿದೆ.

ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಬಾಲಸಂಜೀವಿನಿ ಯೋಜನೆಯಡಿ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲಾಗುವುದು. ಪೋಷಕರು ಸರಿಯಾದ ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನೀಡುವುದರಿಂದ ಅಪೌಷ್ಟಿಕತೆಯನ್ನು ಹೋಗಲಾಡಿಸಬಹುದು ಎಂದು ಸಲಹೆ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಮಾತನಾಡಿ, ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಶಿಶುವಿಗೆ ಪ್ರತಿದಿನ ಅಕ್ಕಿ, ಗೋಧಿ, ತೊಗರಿಬೇಳೆ, ಹೆಸರುಕಾಳು, ಬೆಲ್ಲದಿಂದ ತಯಾರಿಸಿದ ವಿವಿಧ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಪ್ರತಿ ಮಗುವಿಗೆ ಔಷಧೋಪಚಾರಕ್ಕಾಗಿ ವರ್ಷಕ್ಕೆ 750ರೂ. ಮೀಸಲಿಡಲಾಗಿದ್ದು ಪೋಷಕರು ತಪ್ಪದೇ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳು ಕಳುಹಿಸುವಂತೆ ಕೋರಿದರು.

ನವೋದಯ ವೈದ್ಯಕೀಯ ಕಾಲೇಜಿನ ಡಾ.ಗಿರಿಧರ ದೇವರು, ಡಾ.ಚನ್ನಬಸವ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕರವೀರಪ್ರಭು ಕ್ಯಾಲಕೊಂಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ್, ಯೋಜನೆಯ ತಾಲ್ಲೂಕು ವ್ಯವಸ್ಥಾಪಕ ದೀಪಕ್ ಗಾಡವಿ, ಮಹಿಳಾ ಆರೋಗ್ಯ ಸಂದರ್ಶಕಿ ಎ.ಐ.ಪಾಟೀಲ್, ಜಯಶ್ರೀ, ಸರಸ್ವತಿ, ಲಕ್ಷ್ಮೀ, ರಾಧಾ, ಗುರುರಾಜಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.