ADVERTISEMENT

ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 6:00 IST
Last Updated 4 ಫೆಬ್ರುವರಿ 2012, 6:00 IST

ರಾಯಚೂರು: ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ  ಪ್ರಥಮ ಬಾರಿಗೆ ರಾಜ್ಯ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ಪ್ರಗತಿ ಸೇರಿದಂತೆ ಅನೇಕ ಮಾಹಿತಿಗಳನ್ನು ಒಳಗೊಂಡಿರುವಂಥ ಯೋಜನೆ ಇದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮನೋಜ ಜೈನ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ  ಶುಕ್ರವಾರ ಆಯೋಜಿಸಿದ್ದ `ನಮ್ಮೂರು ರಾಯಚೂರು~ ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಗಳ ಹಾಗೂ ಸಾರ್ವಜನಿಕ ಆಸ್ತಿಗಳ ಕೈಪಿಡಿ ಬಗ್ಗೆ ಪರಿಚಯ ಹಾಗೂ ಚಾಲನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಿಯೋನಿಕ್ಸ್ ತಂತ್ರಜ್ಞಾನ ವಿಭಾಗಕ್ಕೆ  ಈ ವ್ಯವಸ್ಥೆಯನ್ನು ನಿರ್ವಹಿಸಲಿದೆ. ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಲೆಕ್ಕಾಧಿಕಾರಿಗಳು ಈ ನೂತನ ಯೋಜನೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಕಳೆದ 5- 10 ವರ್ಷಗಳಿಂದ ನಡೆದ ಕಾಮಗಾರಿ ಪ್ರಗತಿ ಕುರಿತು ಭಾವಚಿತ್ರದೊಂದಿಗೆ ಮೂರು ತಿಂಗಳಲ್ಲಿ ದಾಖಲೆ ನೀಡಬೇಕು. ಸಾರ್ವಜನಿಕ ಆಸ್ತಿಗಳ ವಿಸ್ತೀರ್ಣದ ಪ್ರಮಾಣದ ಮಾಹಿತಿಯೂ ಈ ಯೋಜನೆಯಲ್ಲಿ  ಲಭ್ಯವಾಗಲಿದೆ ಎಂದು ವಿವರಿಸಿದರು.


ಬೆಂಗಳೂರಿನ ಕಿಯೋನಿಕ್ಸ್‌ನ ವ್ಯವಸ್ಥಾಪಕ ಎಸ್.ಆರ್ ಹೆಗಡೆ ತಂತ್ರಜ್ಞಾನದ ಬಳಕೆ ಕುರಿತ ಕ್ರಮಗಳ ಬಗ್ಗೆ  ಅಧಿಕಾರಿಗಳಿಗೆ ವಿವರಿಸಿದರು. ಪ್ರಾಸ್ತಾವಿಕವಾಗಿ ಜಿಪಂ ಯೋಜನಾಧಿಕಾರಿ ಡಾ.ರೋಣಿ ಮಾತನಾಡಿದರು. ಜಿಪಂ ಉಪಕಾರ್ಯದರ್ಶಿ ಮಹಮ್ಮದ್ ಯೂಸೂಫ್ ಖಾನ್, ಸಂಸ್ಥೆಯ ವ್ಯವಸ್ಥಾಪಕ ಮಹಮ್ಮದ್ ಇಕ್ಬಾಲ್, ಕುಲಕರ್ಣಿ ಹಾಗೂ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.