ADVERTISEMENT

ಅರಣ್ಯ ಇಲಾಖೆಯ ಸಮೀಕ್ಷೆ ಕಾರ್ಯ ನಿಲ್ಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 7:10 IST
Last Updated 20 ಏಪ್ರಿಲ್ 2011, 7:10 IST

ರಾಯಚೂರು: ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಹಾಗೂ ಪಟ್ಟಾ ಜಮೀನುಗಳನ್ನು ಅರಣ್ಯ ಇಲಾಖೆಯ ಕೈಗೊಂಡಿರುವ ಸರ್ವೆ ಕಾರ್ಯವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಇದೇ 20ರಂದು ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಯರಗೇರಾ ಗ್ರಾಮದ ನಾಡ ತಹಸೀಲ್ದಾರ ಕಚೇರಿ ಎದುರು ದನಕರಗಳು ಹಾಗೂ ಎತ್ತು ಬಂಡಿಗಳೊಂದಿಗೆ ಅನಿರ್ದಿಷ್ಟ ಧರಣಿ ನಡೆಸಲಾಗುತ್ತಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಎಂ.ವಿರೂಪಾಕ್ಷಿ ಹಾಗೂ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ಮಹಮ್ಮದ್ ನಿಜಾಮುದ್ದೀನ್ ಅವರು ಹೇಳಿದರು.

ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯರಗೇರಾ ಗ್ರಾಮದ ವ್ಯಾಪ್ತಿಯ ಸರ್ವೆ ನಂಬರ್ 347,319 ಹಾಗೂ 233 ಇವುಗಳಲ್ಲಿ ಒಟ್ಟು ಸುಮಾರ 300ಎಕರೆ ಜಮೀನಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ರೈತರು ಕಳೆದ 100 ವರ್ಷಗಳಿಂದಲೂ ಪೀರ್ತಾಜೀತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಈ ಜಮೀನುಗಳ ಮೇಲೆ ಸುಮಾರು 132 ಕುಟುಂಬಗಳು ಅವಲಂಬಿತರಾಗಿದ್ದಾರೆ ಎಂದು ವಿವರಿಸಿದರು.

ರೈತರ ಹೆಸರುಗಳ ಸಾಗುವಳಿ ಪತ್ರ ಹಾಗೂ ಪಹಣಿಯಲ್ಲಿಯೂ ನೊಂದಾಯಿಸಲಾಗಿತ್ತು. ಆದರೆ, ರೈತರಿಗೆ ಯಾವುದೇ ನೋಟಿಸ್ ನೀಡಿದೆ ಮಾರ್ಚ್ 15ರಂದು ಅರಣ್ಯ ಇಲಾಖೆಯ ಜಮೀನುಗಳ ಸಮೀಕ್ಷೆ ಕಾರ್ಯ ಆರಂಭಿಸಿದೆ ಎಂದು ಆರೋಪಿಸಿದರು.ಈ ರೈತರ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಯಾವ ರೈತರಿಗೆ ಭೂಮಿ ಮಂಜೂರು ಮಾಡಲಾಗಿದೆ ಹಾಗೂ ಸಾಗುವಳಿ ಮಾಡುವ ರೈತರಿಗೆ ಮತ್ತು ಅರ್ಜಿ ಸಲ್ಲಿಸಿದ ರೈತರಿಗೂ ಯಾವುದೇ ತೊಂದರೆ ನೀಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ಕಾರ್ಯವನ್ನು ಮುಂದುವರಿಸಿದ್ದಾರೆ. ಅಲ್ಲದೇ ರೈತರ ಮೇಲೆಯೂ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಈ ಅನಿರ್ದಿಷ್ಟ ಧರಣಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆ. ಅಲ್ಲದೇ ಕಾರ್ಯಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು,ಜಿಪಂ ಸದಸ್ಯ ಹಾಗೂ ತಾಪಂ ಸದಸ್ಯರು, ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಕೂಡಲೇ ಅರಣ್ಯ ಇಲಾಖೆಯು ಕೈಗೊಂಡಿರುವ ಸಮೀಕ್ಷೆ ಕಾರ್ಯವನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು, ಜಿಲ್ಲಾಧಿಕಾರಿಗಳ ಈಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶಂಕರ ವಕೀಲ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.