ADVERTISEMENT

ಆತಂಕ ತಂದ ಆರ್‌ಟಿಪಿಎಸ್‌ ಹಾರುಬೂದಿ

​ಪ್ರಜಾವಾಣಿ ವಾರ್ತೆ
Published 5 ಮೇ 2019, 15:04 IST
Last Updated 5 ಮೇ 2019, 15:04 IST
ದ್ವಿಚಕ್ರ ವಾಹನದ ಮೇಲೆ ಹಾರುಬೂದಿ ಮೆತ್ತಿಕೊಂಡಿರುವುದು
ದ್ವಿಚಕ್ರ ವಾಹನದ ಮೇಲೆ ಹಾರುಬೂದಿ ಮೆತ್ತಿಕೊಂಡಿರುವುದು   

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್‌) ಹಾರುಬೂದಿ ಗಾಳಿಯಲ್ಲಿ ಹಾರಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

ಗಾಳಿಯಲ್ಲಿ ಹೊರ ಬರುವ ಬೂದಿ ಮನೆಗಳಲ್ಲಿ ಇರುವ ಅಡುಗೆ ಪಾತ್ರೆಗಳಲ್ಲಿ ಬೀಳುತ್ತಿದೆ. ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಬೂದಿ ಮೆತ್ತಿಕೊಳ್ಳುತ್ತಿದೆ. ಇದರಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.

ಹಾರುಬೂದಿಯಿಂದಅಸ್ತಮಾ, ಉಸಿರಾಟ ತೊಂದರೆ, ಕ್ಷಯಾರೋಗ ಗಳು ಹರಡಿ ಗ್ರಾಮಸ್ಥರ ಆರೋಗ್ಯ ಸಮಸ್ಯೆ ಉಂಟಾಗಿದೆ. ಜನರ ಜೀವನದೊಂದಿಗೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಎಂದು ಡಿ. ಯದ್ಲಾಪುರ ಗ್ರಾಮದ ಮಾರೆಪ್ಪ ಯದ್ದಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಆರ್‌ಟಿಪಿಎಸ್‌ದಿಂದ ಗಾಳಿಯಲ್ಲಿ ಹಾರಿ ಬರುವ ಹಾರುಬೂದಿ ತಡೆಗಟ್ಟಬೇಕು. ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ಇದ್ದರೂ ಕಣ್ಣಿಗೆ ಕಂಡರೂ ಕಾಣದಂತೆ ಮೌನ ವಹಿಸಿದ್ದು ಸಂಶಯಾಸ್ಪದಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

210 ಮೆಗಾವಾಟ್ ಸಾಮರ್ಥ್ಯದ 3ನೇ ವಿದ್ಯುತ್ ಘಟಕದಿಂದ ಹೊರ ಬರುವ ಬೂದಿ ಪೈಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಗಾಳಿಯಲ್ಲಿ ಬೂದಿ ಹರಡಿದೆ. ಈ ಘಟಕದಲ್ಲಿ ಕಂಡು ಸಮಸ್ಯೆಯನ್ನು ಪರಿಶೀಲಿಸಿ ದುರಸ್ತಿಗೊಳಿಸಲಾಗಿದೆ. ಬೂದಿ ಹೊರ ಬರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಟಿಪಿಎಸ್ ಯೋಜನಾ ಪ್ರದೇಶದ ಮುಖ್ಯಸ್ಥ ಮಲ್ಲಿಕಾರ್ಜುನಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*ಗಾಳಿಯಲ್ಲಿ ಹೊರ ಬಿಡುವ ಬೂದಿ ಬಗ್ಗೆ ಆರ್‌ಟಿಪಿಎಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವೆ.ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

–ನಟೇಶ್, ಪರಿಸರ ಅಧಿಕಾರಿ, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.