ADVERTISEMENT

ಆಶೋತ್ತರಗಳಿಗೆ ಸ್ಪಂದಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:20 IST
Last Updated 1 ಜೂನ್ 2013, 10:20 IST

ಲಿಂಗಸುಗೂರ: ರಾಜ್ಯದಲ್ಲಿ ಉದ್ಯೋಗ ಸಿಗದೆ ಯುವಕರು ಕಂಗಾಲಾಗಿದ್ದಾರೆ. ಜನತೆ ಮೂಲ ಸೌಕರ್ಯ ಪಡೆಯದೆ ವಂಚಿತರಾಗಿದ್ದಾರೆ. ಅಸಮಾಧಾನ, ಅತೃಪ್ತಿಗಳ ಮಧ್ಯೆ ಬದುಕು ಕಟ್ಟಿಕೊಳ್ಳುತ್ತಿರುವ ನಾಗರಿಕ ಸಮಾಜಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಉದ್ಯೋಗ ಸೃಷ್ಟಿಸುವ ಮೂಲಕ ಯುವಜನರ ಆಶೋತ್ತರಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವ ಫೆಡರೇಶನ್ (ಡಿವೈಎಫ್‌ಐ) ಆಗ್ರಹಪಡಿಸಿದೆ.

ಶುಕ್ರವಾರ ತಹಸೀಲ್ದಾರ ಶಿರಸ್ತೇದಾರ (ಪ್ರಭಾರಿ) ಮಲ್ಲಿಕಾರ್ಜುನ ಅವರ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಅರ್ಪಿಸಿದ ಪದಾಧಿಕಾರಿಗಳು, ಸಂವಿಧಾನದ ಕಲಂ 371ರಡಿ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು. ಕಿಯೋನಿಕ್ಸ್ ಸಂಸ್ಥೆ ಮೂಲಕ ತರಬೇತಿ ಕೊಡಿಸುವುದನ್ನು ತಡೆಯಬೇಕು. ಶಿಕ್ಷಣದ ಕೇಸರಿಕರಣಕ್ಕೆ ಕಡಿವಾಣ ಹಾಕಬೇಕು.

ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಯಾಗಬೇಕು. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ರೂ. 10ಸಾವಿರ ವೇತನ ನಿಗದಿಮಾಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಕಲ್ಪಿಸಬೇಕು. ಬಿಜೆಪಿ ದುರಾಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅನೈತಿಕತೆ ಸೃಷ್ಟಿಸುವ ದುಷ್ಟ ಶಕ್ತಿಗಳಿಗೆ ಕಡಿವಾಣ ಹಾಕುವುದು ಸೇರಿದಂತೆ 23ಕ್ಕೂ ಹೆಚ್ಚು ಬೇಡಿಕೆಗಳ ಮನವಿ ಅರ್ಪಿಸಿದರು.

ಬಾಬು ಕಡ್ಡೋಣಿ, ಸಿದ್ರಾಮಪ್ಪ ನಾಯಕ, ಲಕ್ಷ್ಮಿಬಾಯಿ, ವಿಜಯಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.