ADVERTISEMENT

ಇಂದಿನಿಂದ ರಾಯಚೂರು ಹಬ್ಬ ಶುರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 9:40 IST
Last Updated 14 ಜೂನ್ 2011, 9:40 IST

ರಾಯಚೂರು: `ಕಾರ ಹುಣ್ಣಿಮೆ~ ಅಂಗವಾಗಿ ಇಲ್ಲಿನ ಮುನ್ನೂರು ಕಾಪು ಸಮಾಜವು ಹನ್ನೆರಡು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ `ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ~ ಇದೇ 14ರಿಂದ 16ರವರೆಗೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿದೆ.

ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ, ಕುಸ್ತಿ ಸ್ಪರ್ಧೆ, ನೃತ್ಯ ರೂಪಕ, ಜಾನಪದ ಸಂಗೀತ, ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಮಾತಾ ಲಕ್ಷಮ್ಮ ದೇವಿ ಹಾಗೂ ಎತ್ತುಗಳ ಬೃಹತ್ ಮೆರವಣಿಗೆ, ಟಗರುಗಳ ಕಾಳಗ ಈ ಬಾರಿಯ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ವಿಶೇಷತೆಗಳಾಗಿವೆ.

ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿವೆ. ಮಣಿಪುರ, ರಾಜಸ್ತಾನ್, ಗುಜರಾತ್ ಸುಪ್ರಸಿದ್ಧ ಕಲಾವಿದರಿಂದ ನೃತಯ ರೂಪಕ ನಗರದ ಮುನ್ನೂರು ಕಾಪು ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ, ಐಡಿಎಸ್‌ಎಂಟಿ ಬಡಾವಣೆ, ವಾಸವಿನಗರ ಬಸ್ ನಿಲ್ದಾಣ ಆವರಣದಲ್ಲಿ ನಡೆಯಲಿದೆ.

14ರಂದು ಬೆಳಿಗ್ಗೆ 8ಕ್ಕೆ ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯನ್ನು ಉದ್ಘಾಟಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಚಾಲನೆ ನೀಡುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಎ ಪಾಪಾರೆಡ್ಡಿ ವಹಿಸುವರು. ಸಾನಿಧ್ಯವನ್ನು ಮುನ್ನೂರು ಕಾಪು ಸಮಾಜದ ಸೂನ್ಯ ಸಿಂಹಾಸನಪೀಠದ ಸದ್ಗುರು ಶರಣ ತಿಪ್ಪೇಶ್ವರಸ್ವಾಮಿ ವಹಿಸಲಿದ್ದಾರೆ.

15ರಂದು ಸಂಜೆ 5ಕ್ಕೆ ಮಾತಾ ಲಕ್ಷ್ಮಮ್ಮದೇವಿಯ ಭಾವಚಿತ್ರ ಹಾಗೂ ಎತ್ತುಗಳ ಮೆರವಣಿಗೆಯನ್ನು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಉದ್ಘಾಟಿಸುವರು. 16ರಂದು ಮಧ್ಯಾಹ್ನ  ಗ್ರಾಮೀಣ ಕ್ರೀಡೆಗಳಾದ ಗುಂಡು ಎತ್ತುವ ಸ್ಪರ್ಧೆ, ಉಸುಕಿನ ಚೀಲ ಎತ್ತುವ ಸ್ಪರ್ಧೆ ಮಾತಾ ಲಕ್ಷ್ಮಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುವುದು. ಟಗರು ಕಾಳಗವೂ ನಡೆಯಲಿದೆ. ಸಂಜೆ 5ಕ್ಕೆ ರಾಜೇಂದ್ರ ಗಂಜ್ ಆವರಣದಲ್ಲಿ ಕುಸ್ತಿ ಸ್ಪರ್ಧೆ ನಡೆಯುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಸಿ.ಸಿ ಪಾಟೀಲ ಉದ್ಘಾಟಿಸಲಿದ್ದಾರೆ.

ಒಂದುವರೆ, ಎರಡು, ಎರಡುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಭಾರಿ ಎತ್ತುಗಳು ಪ್ರತಿ ವರ್ಷ ಪಾಲ್ಗೊಳ್ಳುತ್ತಿದೆ. ಗದಗ, ಹಾವೇರಿಯಿಂದ ಟಗರುಗಳು ಟಗರು ಕಾಳಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿವೆ. ಆಂಧ್ರ, ಕರ್ನಾಟಕ, ಮಹಾರಾಷ್ಟ್ರದ ಕುಸ್ತಿಪಟುಗಳು ಈ ಬಾರಿಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು, ಸಮಾಜದ ಮುಖಂಡರಾದ ಮಾಜಿ ಶಾಸಕ ಎ. ಪಾಪಾರೆಡ್ಡಿ ಹೇಳಿದ್ದಾರೆ.

10 ಸಾವಿರದಿಂದ 50 ಸಾವಿರದವರೆಗೆ ಆಕರ್ಷಕ ಬಹುಮಾನ ಹೊಂದಿರುವ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯು ಈ ಮುಂಗಾರು ಸಾಂಸ್ಕೃತಿಕ ಹಬ್ಬದ ವಿಶೇಷ. ಆಂಧ್ರಪ್ರದೇಶ, ಕರ್ನಾಟಕದ ಸಾವಿರಾರು ರೈತರು ಈ ಹಬ್ಬದಲ್ಲ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಾರೆ. ಹಲವು ದಶಕಗಳಿಂದ ಈ ಹಬ್ಬವನ್ನು ತನ್ನದೇ ಆದ ವಿಶೇಷ ಕಾಳಜಿಯಿಂದ ಉಳಿಸಿಕೊಂಡು ಬಂದಿರುವ ಮುನ್ನೂರು ಕಾಪು ಸಮಾಜವು ವರ್ಷದಿಂದ ವರ್ಷಕ್ಕೆ `ರೈತರ ಹಬ್ಬವಾದ ಕಾರ ಹುಣ್ಣಿಮೆಯ ದಿನ ಹಬ್ಬಕ್ಕೆ ಹೊಸತನ, ಹೊಸ ಮೆರಗು ನೀಡುತ್ತ ಬಂದಿದೆ.

ಬಹುಪಾಲು ಸಮಾಜ ಬಾಂಧವರ ಉದಾರ ದೇಣಿಗೆ, ಸಂಘ ಸಂಸ್ಥೆಗಳ ಸಹಕಾರದಿಂದ ಈ ಹಬ್ಬಕ್ಕೆ ಬೆನ್ನೆಲುಬಾಗಿ ನಿಂತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.