ಜಾಲಹಳ್ಳಿ: ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಒಂದು ವಾರದಿಂದ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಚರಂಡಿ ಹಾಗೂ ಗಾಜಲದಿನ್ನಿ ಹಳ್ಳದ ನೀರು ದೇವದುರ್ಗ-ತಿಂಥಣಿ ಸೇತುವೆಯ ಮುಖ್ಯ ರಸ್ತೆಯ ಮೇಲೆ ಹರಿಯುತ್ತಿದೆ.
ಇದರಿಂದಾಗಿ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಲೋಕೋಪಯೋಗಿ ಇಲಾಖೆ ತಮಗೂ ಈ ರಸ್ತೆಗೂ ಸಂಬಂಧ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದೆ.
ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಹಳ್ಳದ ನೀರು ಹರಿಯುವ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ಮಾಡಲು ಪರವಾನಿಗೆ ನೀಡಿರುವುದು ಹಾಗೂ ಚರಂಡಿಗಳಲ್ಲಿ ಇರುವ ಹೂಳು ತೆಗೆಯದೇ ಇರುವುದರಿಂದ ಮಲಿನ ನೀರು ಮುಖ್ಯ ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.
ದೇಶದ ಮಹಾನ್ ವ್ಯಕ್ತಿಗಳ ವೃತ್ತಗಳನ್ನು ಸ್ಥಾಪಿಸಿ ಅವುಗಳ ಪಕ್ಕದಲ್ಲಿಯೇ ಚರಂಡಿ ನೀರು ಹರಿಯುತ್ತಿರುವುದನ್ನು ಕಂಡು ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿರುವುದು ಸೋಜಿಗವಾಗಿದೆ.
ಸಂಭಂದಿಸಿದ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ಪಟ್ಟಣದ ವಾಲ್ಮೀಕಿ, ಡಾ.ಅಂಬೇಡ್ಕರ್, ಬಸವೇಶ್ವರ್, ಟಿಪು ಸುಲ್ತಾನ್ ವೃತ್ತಗಳ ಪಕ್ಕದಲ್ಲಿಯೇ ಹರಿಯುತ್ತಿರುವ ಚರಂಡಿಗಳನ್ನು ಸ್ವಚ್ಚ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಲ್ಲದೇ ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿರುವ ಮುಖ್ಯ ರಸ್ತೆಯ ಕಾಮಗಾರಿಯು ಕಳೆದ 2 ವರ್ಷದಿಂದ ನಡೆಯುತ್ತಿದೆ. ಪ್ರಥಮ ಹಂತದ ಕಾಮಗಾರಿಯು ತಿಂಥಣಿ ಸೇತುವೆಯಿಂದ ದೇವದುರ್ಗದ ವರೆಗೆ ನಡೆಯ ಬೇಕಾಗಿತ್ತು.
ಆದರೆ ಗುತ್ತಿಗೆದಾರರು ಕಲ್ಮಲದಿಂದ ದೇವದುರ್ಗದ ವರೆಗಿನ ರಸ್ತೆಯ ಕಾಮಗಾರಿ ಮಾಡುತ್ತಿರುವುದರಿಂದ ಜಾಲಹಳ್ಳಿ ಭಾಗದ ಮುಖ್ಯ ರಸ್ತೆ ದುರಸ್ತಿ ಕಾಣದೇ ತೀರಾ ಹದಗೆಡಲು ಕಾರಣವಾಗಿದೆ.
ದ್ವಿಚಕ್ರ ವಾಹನ ಸವಾರರು ಈ ರಸ್ತೆಯ ಮೇಲೆ ಸಂಚರಿಸಲು ಸಾಧ್ಯವಾಗದೇ ಇರುವಷ್ಟು ಗುಂಡಿಗಳು ನಿರ್ಮಾಣವಾಗಿವೆ. ತಕ್ಷಣವೇ ರಸ್ತೆಯ ಬಗ್ಗೆ ಗಮನ ಹರಿಸಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.