ರಾಯಚೂರು: ನಗರದ ಸರಾಫ್ ಬಜಾರದ ಜಾಮಿಯಾ ಮಸೀದಿಯ ಆವರಣದಲ್ಲಿ ನ್ಯೂ ಎಜ್ಯುಕೇಶನ್ ಸೊಸೈಟಿಯು ನಡೆಸುತ್ತಿರುವ ಖೌಮಿ ಮದರಸಾ ಉರ್ದು ಪ್ರಾಥಮಿಕ ಶಾಲೆಯನ್ನು ತೆರವುಗೊಳಿಸಲು ವಕ್ಫ್ ಆಡಳಿತಾಧಿಕಾರಗಳ ಮೂಲಕ ಶಾಸಕ ಸಯ್ಯದ್ ಯಾಸಿನ್ ಅವರು ಒತ್ತಡ ಹೇರುತ್ತಿದ್ದಾರೆ. ಶಾಸಕರ ಈ ರೀತಿಯ ಒತ್ತಡ ತಂತ್ರದ ಹಿಂದೆ ಸಮುದಾಯದ ಹಿತ ಚಿಂತನೆ ಅಡಗಿಲ್ಲ ಎಂದು ರಾಜ್ಯ ಸಭಾ ಮಾಜಿ ಸದಸ್ಯ ಹಾಗೂ ನ್ಯೂ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅಬ್ದುಲ್ ಸಮದ್ ಸಿದ್ದಿಕಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂ ಎಜ್ಯುಕೇಶನ್ ಸೊಸೈಟಿಯು 1968ರಲ್ಲಿ ಅಧಿಕೃತವಾಗಿ ಆರಂಭಗೊಂಡ ಶಿಕ್ಷಣ ಸಂಸ್ಥೆ. ಅದಕ್ಕೂ ಮುನ್ನವೇ ಸರಾಫ್ ಬಜಾರನಲ್ಲಿರುವ ಜಾಮೀಯಾ ಮಸೀದಿ ಆವರಣದಲ್ಲಿ ವಕ್ಫ್‌ಗೆ ಸೇರಿದ ಜಾಗೆಯಲ್ಲಿ ನಗರದ ಕೊಳಚೆ ಪ್ರದೇಶ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿತು. ಈಗಲೂ ಅಲ್ಲಿ ಶಾಲೆ ನಡೆಯುತ್ತಿದೆ. 12 ಕೊಠಡಿಗಳಲ್ಲಿ 1ರಿಂದ 7ನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು.
ಈಗಲೂ ಆ ಶಾಲೆಗೆ ಬರುವ ಮಕ್ಕಳು ಬಡವರ ಮಕ್ಕಳೇ. ಹೀಗಾಗಿ ಆ ಶಾಲೆ ಅಭಿವೃದ್ಧಿಗೆ ಸಂಸ್ಥೆಯು ಗಮನಹರಿಸಿದೆ. ಆದರೆ, ವಕ್ಫ್ ಆಡಳಿತ ಮಂಡಳಿಯು ಮಸೀದಿ ಆವರಣದಲ್ಲಿರುವ ಈ ಶಾಲೆ ತೆರವುಗೊಳಿಸಬೇಕು ಎಂದು ಮೂರ‌್ನಾಲ್ಕು ಬಾರಿ ನೋಟಿಸ್ ನೀಡಿದೆ. ಒಂದು ವರ್ಷದ ಹಿಂದೆ ವಿದ್ಯುತ್, ನಳ ಕಟ್ ಮಾಡಿಸಿದೆ. ಹೀಗಿದ್ದರೂ ಅದೇ ಸ್ಥಿತಿಯಲ್ಲಿ ಸಾವಿರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಮತ್ತೆ ಶಾಲೆ ತೆರವುಗೊಳಿಸಲು ಒತ್ತಾಯ ಮಾಡುತ್ತಿದೆ. ಇದೆಲ್ಲಕ್ಕೂ ರಾಯಚೂರು ನಗರ ಶಾಸಕ ಸಯ್ಯದ್ ಯಾಸಿನ್ ಅವರೇ ಕಾರಣ ಎಂದು ಆಪಾದಿಸಿದರು.
1ರಿಂದ 7 ತರಗತಿವರೆಗಿನ ಖೌಮಿ ಮದರಸಾ ಶಾಲೆ ತೆರವುಗೊಳಿಸುವುದು. ಆ ಜಾಗೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಮಾಡುವ ಆಮಿಷವನ್ನು ವಕ್ಫ್ ಆಡಳಿತ ವರ್ಗಕ್ಕೆ ಶಾಸಕರು ತೋರಿಸಿದ್ದಾರೆ. ನಗರದಲ್ಲಿನ ಬಡ ಮಕ್ಕಳು ವ್ಯಾಸಂಗಕ್ಕೆ ಉಪಯುಕ್ತ ಶಾಲೆ ತೆರವು ಮಾಡಿ ಹೊರಗಡೆಯಿಂದ ವೈದ್ಯಕೀಯ, ಎಂಜಿನಿಯರಿಂಗ್ ವ್ಯಾಸಂಗಕ್ಕೆ ಬರುವವರಿಗೆ ಈ ಸ್ಥಳದಲ್ಲಿ ವಸತಿ ನಿಲಯ ನಿರ್ಮಾಣ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದನ್ನು ಶಾಸಕರು ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಜಾಮೀಯಾ ಮಸಿದಿ ಆವರಣದಲ್ಲಿ ಶಾಲೆ ಇರುವ ಜಾಗೆ ವಕ್ಫ್‌ಗೆ ಸೇರಿದ್ದು ಎಂಬುದನ್ನು ನ್ಯೂ ಎಜ್ಯುಕೇಶನ್ ಸೊಸೈಟಿ ಅಲ್ಲಗಳೆಯುವುದಿಲ್ಲ. ಜಾಗೆಗೆ ಅವರೇ ಮಾಲೀಕರು. ಆದರೆ, ಅಲ್ಲಿ ನಮ್ಮ ಸಂಸ್ಥೆ ನಡೆಸುವ ಶಾಲೆಗೆ ತೊಂದರೆ ಕೊಡಬೇಡಿ ಎಂಬುದು ನಮ್ಮ ಬೇಡಿಕೆ. ಮಸೀದಿ ಆವರಣದ ಒಳಮಗ್ಗುಲಲ್ಲಿ ಶಾಲಾ ಕೊಠಡಿ ನಿರ್ಮಾಣಗೊಂಡರೆ ರಸ್ತೆ ಹೊಂದಿಕೊಂಡು ಕಾಂಪ್ಲೆಕ್ಸ್ ನಿರ್ಮಿಸಿ ಪ್ರತಿ ತಿಂಗಳು 1.75 ಲಕ್ಷ ಆದಾಯ ಮಸೀದಿಗೆ ಬರುವಂತೆ ಮಾಡಲಾಗಿದೆ. ಆದರೆ, ಈ ವಿಚಾರವಕ್ಫ್ ಆಡಳಿತ ಅಧಿಕಾರಿ, ಶಾಸಕರು ಗಮನಹರಿಸಿಲ್ಲ.
ಹಾಗೆ ನೋಡಿದರೆ ದರ್ಗಾ, ಮಸೀದಿಗೆ ಬರುವ ಆದಾಯದಲ್ಲಿ ಶೇ 25ರಷ್ಟು ಆರೋಗ್ಯ ಮತ್ತು ಶಿಕ್ಷಣಕ್ಕೆ ಬಳಕೆ ಮಾಡಬೇಕು. ಈ ಸದಾಶಯದ ಹಿನ್ನೆಲೆಯಲ್ಲಿ ಜಾಮೀಯಾ ಮಸೀದಿ ಆವರಣದಲ್ಲಿರುವ ಶಾಲೆ ತೆರವು ಪ್ರಸ್ತಾಪ ಕೈ ಬಿಡಬೇಕು ಎಂದು ತಿಳಿಸಿದರು. ಹಠಾತ್ ಈ ಶಾಲೆ ಬೇರೆ ಕಡೆ ಸ್ಥಳಾಂತರ ಮಾಡಿದರೆ ಈಗಿರುವ ಪ್ರದೇಶದ ಸುತ್ತಮುತ್ತಲಿನ ಮಕ್ಕಳ ಶಿಕ್ಷಣದ ಗತಿ ಏನು? ಎಲ್ಲಿಗೆ ಹೋಗಿ ವ್ಯಾಸಂಗ ಮಾಡಬೇಕು. ದೂರ ಪ್ರದೇಶಕ್ಕೆ ಶಾಲೆ ಸ್ಥಳಾಂತರಗೊಂಡರೆ ಅಲ್ಲಿಗೆ ಮಕ್ಕಳು ಬರುವುದೂ ಕಷ್ಟ ಎಂದರು.
ನ್ಯೂ ಎಜ್ಯುಕೇಶನ್ ಸೊಸೈಟಿಯು ಡಿಎಡ್, ಬಿಎಡ್ ಕೋರ್ಸ್, ಕಾಲೇಜು ಆರಂಭಿಸಲು ಈ ಹಿಂದೆ ವಕ್ಫ್ ಆಡಳಿತ ಮಂಡಳಿಗೆ ಮಾವಿನ ಕೆರೆ ಹತ್ತಿರ ಇರುವ 4 ಎಕರೆ ಜಾಗೆಯಲ್ಲಿ, ನಗರದ ಹೃದಯಭಾಗದಲ್ಲಿರುವ ಹಾಷ್ಮಿಯಾ ಕಂಪೌಂಡ್‌ನಲ್ಲಿ, ಶಂಶಾಲಂ ದರ್ಗಾ ಹತ್ತಿರ ಇರುವ ವಕ್ಫ್ ಜಾಗೆ ದೊರಕಿಸಲು ಕೋರಿತ್ತು. ಸ್ಪಂದಿಸಿಲ್ಲ. ವಕ್ಫ್ ಮಂಡಳಿಯೇ ಜಾಗೆ ದೊರಕಿಸದಿದ್ದರೇ ನಗರದ ಒಳಗಡೆ ಬೇರೆಯವರು ಜಾಗೆ ಹೇಗೆ ದೊರಕಿಸುತ್ತಾರೆ ಎಂದು ಪ್ರಶ್ನಿಸಿದರು. ವಕ್ಫ್ ಮಂಡಳಿ ಆಡಳಿತಾಧಿಕಾರಿಗಳ ನೋಟಿಸ್, ನಳ, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗಿದೆ.
ಶಾಸಕರು ಈ ಸಮಸ್ಯೆ ಅರ್ಥ ಮಾಡಿಕೊಂಡು ಶಾಲೆ ಸ್ಥಳಾಂತರಿಸಲು ಒತ್ತಡ ಹೇರುವ ತಂತ್ರ ಕೈ ಬಿಡಬೇಕು. ನಮಗೆ ಸಮುದಾಯದ ಮಕ್ಕಳ ಹಿತ, ಶಿಕ್ಷಣ ಮುಖ್ಯವಾಗಿದೆ. ರಾಜ್ಯಸಭಾ ಸದಸ್ಯನಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ತಮಗೆ ಇನ್ನೂ ಯಾವುದೇ ರಾಜಕೀಯ ಮಾಡುವ ಉದ್ದೇಶವಿಲ್ಲ ಎಂದು ಹೇಳಿದರು. ನ್ಯೂ ಎಜ್ಯುಕೇಶನ್ ಸೊಸೈಟಿಯ ಅಬ್ದುಲ್ ಸತ್ತಾರ ತತ್ತಾರಿ, ಮಹಮ್ಮದ್ ಹಸನ್ ಮೊಹಸಿನ್ ಹಾಗೂ ಕಾರ್ಯಕಾರಿ ಸಮಿತಿ ಕೆಲ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.