ADVERTISEMENT

ಉಲ್ಲಂಘನೆ: 58 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 5:58 IST
Last Updated 26 ಏಪ್ರಿಲ್ 2013, 5:58 IST

ರಾಯಚೂರು: ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವಿವಿಧ ಪಕ್ಷಗಳ ವಿರುದ್ಧ 58 ಪ್ರಕರಣ ದಾಖಲಿಸಲಿಕೊಳ್ಳಲಾಗಿದೆ. ಗರಿಷ್ಠ ಪ್ರಕರಣಗಳು 17 ಬಿಜೆಪಿ ವಿರುದ್ಧ ದಾಖಲಾಗಿದೆ. ಕಾಂಗ್ರೆಸ್ 9, ಜೆಡಿಎಸ್ 7, ಕೆಜೆಪಿ 6, ಬಿಎಸ್‌ಆರ್ ಕಾಂಗ್ರೆಸ್ 7 ಹಾಗೂ ಸಿಪಿಐ ವಿರುದ್ಧ 1 ಪ್ರಕರಣ ಸೇರಿದಂತೆ 58 ಪ್ರಕರಣ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ನಿನ್ನೆಯವರೆಗೆ ಒಟ್ಟು 41 ಲಕ್ಷ ಮೊತ್ತ ಜಪ್ತಿ ಮಾಡಲಾಗಿದೆ. ಇದೆಲ್ಲವೂ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಮೊತ್ತವಾಗಿದೆ. ಅಕ್ರಮ ಮದ್ಯ ಸಾಗಾಟ, ಸಂಗ್ರಹಕ್ಕೆ ಸಂಬಂಧಿಸಿದಂತೆ 43 ಪ್ರಕರಣ ದಾಖಲಾಗಿದೆ. ಅಬಕಾರಿ ಇಲಾಖೆಯು ಪ್ರತ್ಯೇಕವಾಗಿ 62 ಪ್ರಕರಣ ದಾಖಲಿಸಿದೆ. 38 ಜನರನ್ನು ಬಂಧಿಸಲಾಗಿದೆ. 1,104 ಲೀಟರ್ ಅಕ್ರಮ ಮದ್ಯ ಜಪ್ತಿ ಮಾಡಲಾಗಿದ್ದು, ಇದರ ಮೊತ್ತ ಸುಮಾರು 4, 2,800 ಆಗಿದೆ ಎಂದು ವಿವರಿಸಿದರು.

ದೇವದುರ್ಗದಲ್ಲಿ ಪರವಾನಗಿ ಇಲ್ಲದೇ ಬುಧವಾರ ವಾಹನ ಬಳಕೆ ಮಾಡಿದ್ದಕ್ಕಾಗಿ 8 ಪ್ರಕರಣ ದಾಖಲಾಗಿದೆ. ನಂಬರ್ ಪ್ಲೇಟ್ ಇಲ್ಲದೇ ವಾಹನ ಬಳಕೆ ಮಾಡಲಾಗಿದೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನೋಟಿಸ್ ಕೊಡಲಾಗಿದೆ. ಇಲ್ಲಿಯವರೆಗೆ ಈ ರೀತಿ 42 ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ದೇವದುರ್ಗ ಕ್ಷೇತ್ರದಲ್ಲಿ ಅಧಿಕಾರಿಗಳೇ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ ಎಂಬು ದೂರು ಕಾಂಗ್ರೆಸ್‌ನಿಂದ, ಮತ್ತೊಂದು ದೂರು ಕೆಜೆಪಿ ಪಕ್ಷದಿಂದ ಬಂದಿದ್ದು, ಅವರ ದೂರು ಅಕ್ರಮ ಮದ್ಯ ಹಂಚಿಕೆ ವ್ಯಾಪಕವಾಗಿರುವುದು. ನಿಯಂತ್ರಣ ಮಾಡಬೇಕು ಎಂದು ಇತ್ತು. ಕಾಂಗ್ರೆಸ್ ಪಕ್ಷ ನೀಡಿದ ದೂರನ್ನು ಚುನಾವಣಾ ಆಯೋಗ, ವೀಕ್ಷಕರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಕೆ ಮಾಡಿದ ಕಾರಣಕ್ಕೆ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ ಜೋಶಿ, ಜೆಡಿಎಸ್ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್, ಬಿಎಸ್‌ಆರ್ ಅಭ್ಯರ್ಥಿ ಪೂಜಾಗಾಂಧಿ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಿದರು.

ದಿನದಿಂದ ದಿನಕ್ಕೆ ಕಟ್ಟುನಿಟ್ಟಿನ ಕ್ರಮ: ಮತದಾನ ದಿನಾಂಕ ಸಮೀಪಿಸುತ್ತಿದ್ದೆ. ಚುನಾವಣಾ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಕ್ರಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುತ್ತಿದೆ. ಬಸ್ ಹಾಗೂ ಬೇರೆ ರೀತಿಯ ವಾಹನಗಳಲ್ಲಿ ಹಣ, ಅಕ್ರಮ ಮದ್ಯ ಸಾಗಿಸುತ್ತಿರುವ ಬಗ್ಗೆಯೂ ಎಚ್ಚರಿಕೆ ವಹಿಸಲಾಗುತ್ತಿದೆ. ಎಲ್ಲ ಚೆಕ್ ಪೋಸ್ಟ್‌ನಲ್ಲಿ ಈಗಾಗಲೇ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಇನ್ನಷ್ಟು ಬಿಗಿಗೊಳಿಸಲಾಗುತ್ತದೆ. ಮುಖ್ಯ ರಸ್ತೆ ಚೆಕ್ ಪೋಸ್ಟ್ ಅಲ್ಲದೇ ಚುನಾವಣಾ ಅಕ್ರಮ ಚಟುವಟಿಕೆ ನಡೆಯುವ ಸ್ಥಳ, ರಸ್ತೆಗಳನ್ನು ಗುರುತಿಸಿ ಅಲ್ಲಿಯೂ ಚೆಕ್‌ಪೋಸ್ಟ್ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು  ವಿವರಿಸಿದರು.

1168 ರೌಡಿ ಶೀಟರ್ ಪೊಲೀಸ್ ವಶಕ್ಕೆ: ಜಿಲ್ಲೆಯಲ್ಲಿ 1168 ರೌಡಿ ಶೀಟರ್ ಇದ್ದು ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ. ಎಲ್ಲರಿಂದಲೂ ಮುಚ್ಚಳಿಕೆ ಪಡೆಯಲಾಗಿದೆ. ಇವರಲ್ಲದೇ ಚುನಾವಣೆ ಸಂದರ್ಭದಲ್ಲಿ ಗಲಾಟೆ, ತೊಂದರೆ ಮಾಡಬಹುದಾದ 491 ವ್ಯಕ್ತಿ ಗುರುತಿಸಿ ಮುಚ್ಚಳಿಕೆ ಪಡೆಯಲಾಗಿದೆ.  ಮಾನ್ವಿ ತಾಲ್ಲೂಕಿನಲ್ಲಿ 246, ದೇವದುರ್ಗ ತಾಲ್ಲೂಕಿನಲ್ಲಿ 221, ರಾಯಚೂರು ಗ್ರಾಮೀಣದಲ್ಲಿ 130, ಸಿಂಧನೂರಿನಲ್ಲಿ 113, ಲಿಂಗಸುಗೂರಲ್ಲಿ 61, ಮಸ್ಕಿಯಲ್ಲಿ 43, ರಾಯಚೂರು ನಗರದಲ್ಲಿ 89 ಜನರು ಇದರಲ್ಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ ವಿವರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ ಮಹಂತೇಶ, ಡಿಎಸ್ಪಿ ದಿವ್ಯಾ ಗೋಪಿನಾಥ್, ಸಹಾಯಕ ಆಯುಕ್ತೆ ಮಂಜುಶ್ರೀ, ಜಿ.ಪಂ ಉಪ ಕಾರ್ಯದರ್ಶಿ ಯೂಸೂಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.