ಗಂಗಾವತಿ: `ಸಮ್ಮೇಳನಕ್ಕಿಂತಲೂ ಮುಖ್ಯವಾಗಿ ಊಟ ಮತ್ತು ಸೂಕ್ತ ವಸತಿ ವ್ಯವಸ್ಥೆಯತ್ತ ಗಮನ ಹರಿಸಿದರೆ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುತ್ತದೆ~ ಎಂದು ಸಂಸದ ಎಸ್. ಶಿವರಾಮಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮ್ಮೇಳನದ ಅಂಗವಾಗಿ ಎಪಿಎಂಸಿ ಆವರಣದಲ್ಲಿರುವ ಸ್ವಾಗತ ಕಚೇರಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ದಾಸೋಹ ಸಮಿತಿಯ ಸಭೆಯಲ್ಲಿ ಸಂಸದ ಮಾತನಾಡಿದರು.
ಆಹ್ವಾನವಿಲ್ಲದೇ ಕಳೆದ ನಾಲ್ಕಾರು ಸಭೆಗೆ ಗೈರು ಹಾಜರಾಗಿದ್ದ ಶಾಸಕ ಶಿವರಾಜ ತಂಗಡಗಿ, ಲಲಿತಾರಾಣಿ ಸೇರಿದಂತೆ ಗುರುವಾರದ ಸಭೆಗೆ ಕೋರಂ ಭರ್ತಿಯಾಗಿತ್ತು. ಆದರೆ ಮಾಜಿ ರಾಜಕಾರಣಿಗಳ್ಯಾರು ತಲೆ ಹಾಕಿರಲಿಲ್ಲ.
`ಬಹುತೇಕ ಎಲ್ಲ ಸಮ್ಮೇಳನದಲ್ಲೂ ಊಟಕ್ಕೆ ಪ್ರಥಮಾದ್ಯತೆ ನೀಡಲಾಗುತ್ತದೆ. ಕಾರ್ಯಕ್ರಮ ಎಷ್ಟೆ ಅಚ್ಚುಕಟ್ಟಾಗಿ ಸಂಘಟಿಸಿದ್ದರೂ ಕೂಡ ಸಮ್ಮೇಳನಕ್ಕೆ ಆಗಮಿಸುವ ಜನರ ಹೊಟ್ಟೆ ಮತ್ತು ನಾಲಿಗೆಯ ರುಚಿ ತಣಿಸದಿದ್ದಲ್ಲಿ ಟೀಕೆ ಟಿಪ್ಪಣಿ ಮಾಡುವುದು ಸಹಜ. ಕೇವಲ ಟೀಕೆ ಮಾತ್ರವಲ್ಲ, ಸಮ್ಮೇಳನ ಯಶಸ್ವಿಗಿಂತಲೂ ಬಹುಬೇಗ ನಾಡಿನ ನಾಲ್ಕೂ ಮೂಲೆಗೆ ಟೀಕೆಗಳು ಪಸರಿಸುತ್ತವೆ. ಸಮ್ಮೇಳನ ಆಯೋಜಿಸಿ ನಗರ, ಕೊಪ್ಪಳ ಜಿಲ್ಲೆಗೆ ಕಪ್ಪುಚುಕ್ಕೆ ತರುವ ಮುನ್ನ ಸಂಘಟಕರು ಆಹಾರದತ್ತ ಎಚ್ಚೆತ್ತುಕೊಳ್ಳಬೇಕು~ ಎಂದರು.
ಸಭೆ ಉದ್ದೇಶಿಸಿ ಶಾಸಕರಾದ ಶಿವರಾಜ ತಂಗಡಗಿ, ಪರಣ್ಣ ಮುನವಳ್ಳಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ. ಶೇಖರಗೌಡ ಮಾಲಿ ಪಾಟೀಲ್, ಜಿ.ಪಂ. ಅಧ್ಯಕ್ಷೆ, ಜ್ಯೋತಿ, ಸಿದ್ದಾಪುರ ಮಂಜುನಾಥ, ಕೆ. ಕಾಳಪ್ಪ, ಬಸವರಾಜ ಕೋಟೆ ಮಾತನಾಡಿದರು.
ಜಿ.ಪಂ. ಸದಸ್ಯ ಅಮರೇಶ ಕುಳಗಿ, ಮಾಜಿ ಸದಸ್ಯ ದೊಡ್ಡಯ್ಯ, ಅಮರೇಶ ಮೈಲಾಪುರಎಸ್.ಬಿ. ಗೊಂಡಬಾಳ, ಎನ್. ಸೂರಿಬಾಬು, ಅಶೋಕ ಸ್ವಾಮಿ ಹೇರೂರು, ಎಸ್. ವಿರುಪಾಕ್ಷಪ್ಪ, ಎಸ್. ಸುರೇಶ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.