ADVERTISEMENT

ಎಲ್ಲೆಡೆ ಸೋಂಕು ಹಾವಳಿ: ಅನಾರೋಗ್ಯಕ್ಕೆ ತತ್ತರಿಸಿದ ಜನತೆ..

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:10 IST
Last Updated 3 ಅಕ್ಟೋಬರ್ 2011, 8:10 IST
ಎಲ್ಲೆಡೆ ಸೋಂಕು ಹಾವಳಿ: ಅನಾರೋಗ್ಯಕ್ಕೆ ತತ್ತರಿಸಿದ ಜನತೆ..
ಎಲ್ಲೆಡೆ ಸೋಂಕು ಹಾವಳಿ: ಅನಾರೋಗ್ಯಕ್ಕೆ ತತ್ತರಿಸಿದ ಜನತೆ..   

ರಾಯಚೂರು: ಮೂಲಭೂತ ಸೌಕರ್ಯದ ಕೊರತೆಯಿಂದ ಕಂಗೆಟ್ಟಿರುವ ಜಿಲ್ಲಾ ಕೇಂದ್ರ `ರಾಯಚೂರು ನಗರ~ ಬಡಾವಣೆಗಳಲ್ಲಿ ಹೆಜ್ಜೆ ಇರಿಸಿದರೆ ಅಸ್ವಚ್ಛತೆ, ದುರ್ನಾತ ಕೊಳಚೆ ನೀರಿನಿಂದ ತುಂಬಿ ಹರಿಯುವ ಚರಂಡಿಗಳು!

ಮಳೆಗಾಲ ಇರಲಿ. ಚಳಿಗಾಲವಿರಲಿ. ಬೇಸಿಗೆ ಕಾಲವೇ ಇರಲಿ. ಈ ನಗರದ ಅಸ್ವಚ್ಛತೆ ಸ್ಥಿತಿ ಮಾತ್ರ ಬದಲಾವಣೆ ಕಾಣುವುದಿಲ್ಲ. ನಗರದ ಜನತೆ ಈ ವಾತಾವರಣದಲ್ಲಿಯೇ ಅನಿವಾರ್ಯವಾಗಿ ಬುದುಕು ನೂಕೂತ್ತಿದ್ದಾರೆ.

ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ಸೊಳ್ಳೆ ನಿಯಂತ್ರಣ ಸೇರಿದಂತೆ ನಗರ ಸ್ವಚ್ಛತಾ ಕಾರ್ಯಕ್ರಮಗಳನ್ನೇ ನಗರಸಭೆ ಮರೆತಂತಿದೆ. ಹೀಗಾಗಿ ನಗರ ಈಗ `ಅನಾರೋಗ್ಯ~ಕ್ಕೆ ತುತ್ತಾಗಿದೆ.

ಮನೆಯಿಂದ ಆಚೆ ಹೆಜ್ಜೆ ಇರಿಸಿದರೆ ಅಸ್ವಚ್ಛತೆ ವಾತಾವರಣದಲ್ಲಿಯೇ ಸುತ್ತಾಡಬೇಕು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈಗ ಕೆಮ್ಮು, ನೆಗಡಿ, ಜ್ವರದಿಂದ ನರಳುವವರಿಗೆ ಲೆಕ್ಕವಿಲ್ಲ. ಯಾವುದೇ ಆಸ್ಪತ್ರೆಗೆ ಹೋದರೂ ರೋಗಿಗಳು ಹೌಸ್ ಫುಲ್!

ಮಲೇರಿಯಾ ರೋಗದಿಂದಲೂ ಸಾಕಷ್ಟು ಜನ ನರಳುತ್ತಿದ್ದಾರೆ. ಡೆಂಗ್ಯು ರೋಗಕ್ಕೂ ತುತ್ತಾಗಿದ್ದ, ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಂದು ಪ್ರಕರಣ ದಾಖಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ತೆರಳಿದ್ದಾರೆ. ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸಿದ್ದರೂ ನಗರಸಭೆ ಎಚ್ಚೆತ್ತಿಲ್ಲ. ಬದಲಾಗಿ ನಿದ್ರೆಗೆ ಜಾರಿದಂತಿದೆ. ಅನಾರೋಗ್ಯಕ್ಕೆ ತುತ್ತಾದ ಜನತೆ ಆಸ್ಪತ್ರೆಗೆ ಅಲೆದು ಸುಸ್ತಾಗಿದ್ದಾರೆ.

ಫಾಗಿಂಗ್ ಮರೆತ ನಗರಸಭೆ: ಜ್ವರ, ಕೆಮ್ಮು, ಮಲೇರಿಯಾ  ರೋಗಕ್ಕೆ ಕಾರಣವಾಗುವ ಸೊಳ್ಳೆ ನಿಯಂತ್ರಣಕ್ಕೆ ನಗರಸಭೆ ಮುನ್ನೆಚ್ಚರಿಕೆ ಕ್ರಮವಾಗಿ   ಸೊಳ್ಳೆ ನಿಯಂತ್ರಣ ಔಷಧಿ ಹೊಂದಿದ ವಾಹನದ ಮೂಲಕ ಧೂಮೀಕರಣ( ಫಾಗಿಂಗ್) ಮಾಡಬೇಕು. ಆದರೆ ಈ ಧೂಮೀಕರಣವನ್ನೇ ನಗರಸಭೆ ಮರೆತಿದೆ. ಯಾವ ಬಡಾವಣೆಗೂ ಹೋದರೂ ಈ ಕಾರ್ಯ ನಡೆದಿಲ್ಲ. ಹೀಗಾಗಿ ಸೊಳ್ಳೆ ಕಾಟ ವಿಪರೀತ ಎಂದು ಜನತೆ ಗೋಳಾಡುತ್ತಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಹೇಳಿಕೆ: ಈ ಒಂದು ತಿಂಗಳು ರೋಗಾಣುಗಳ ಉತ್ಪತ್ತಿ ಕಾಲ. ಸೊಳ್ಳೆ ನಿಯಂತ್ರಣಕ್ಕೆ, ಸ್ವಚ್ಛತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಸ್ವಲ್ಪ ನಿರ್ಲಕ್ಷಿಸಿದರೂ ಸೋಂಕು ಉಲ್ಬಣ  ಕಂಡು ಬರುತ್ತದೆ. ಇದರಿಂದ ಜ್ವರ, ನೆಗಡಿ, ಮೈ ಕೈ ನೋವು ಕಂಡು ಬರುತ್ತದೆ.
ನಾಲ್ಕಾರು ದಿನ ವ್ಯಕ್ತಿಯನ್ನು ಹೈರಾಣು ಮಾಡುತ್ತದೆ. ಆಯಾ ನಗರಸಭೆ, ಸ್ಥಳೀಯ ಸಂಸ್ಥೆಗಳು ಸೊಳ್ಳೆ ನಿಯಂತ್ರಣಕ್ಕೆ, ಸ್ವಚ್ಛತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸೋಂಕು ಹರಡುವುದನ್ನು ಕಡಿಮೆ ಮಾಡಲು ಸಾಧ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ ನಾಯಕ ಪ್ರಜಾವಾಣಿಗೆ  ತಿಳಿಸಿದರು.

ನಗರಸಭೆ ಹೇಳಿಕೆ: ಫಾಗಿಂಗ್‌ಗೆ ಒಂದು ವಾಹನ ಇದೆ. ಸಿಂಪರಣೆಗೆ ಒಂದು ವಾಹನ ಇದೆ. ಸಿಂಪರಣೆ ವಾಹನ ದುರಸ್ತಿಯಲ್ಲಿದೆ. ಫಾಗಿಂಗ್ ಕಾರ್ಯವನ್ನು ಎರಡು ತಿಂಗಳು ಸ್ಥಗಿತಗೊಂಡಿತ್ತು. ಈಗ ಆರಂಭಿಸಲಾಗಿದೆ. ನಗರದ ವಾರ್ಡ್‌ಗಳಲ್ಲಿ ಈ ಕಾರ್ಯ ನಡೆಯುತ್ತಿದೆ. ಒಂದು ವಾಹನಕ್ಕೆ 48 ಲೀಟರ್‌ಡಿಸೇಲ್, 8 ಲೀಟರ್ ಪೆಟ್ರೋಲ್ ಬಳಸಲಾಗುತ್ತಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.