ADVERTISEMENT

ಓಂಬಡ್ಸ್‌ಮನ್‌ರಿಂದ ದಾಖಲಾತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 9:40 IST
Last Updated 22 ಮಾರ್ಚ್ 2011, 9:40 IST

ಲಿಂಗಸುಗೂರ: ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಒಂಬಡ್ಸ್‌ಮನ್‌ರಿಗೆ ದೂರು ನೀಡಲಾಗಿತ್ತು. ತಡವಾಗಿಯಾದರು ಸೋಮವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದ ಓಂಬಡ್ಸ್‌ಮನ್ (ನಿವೃತ್ತ ನ್ಯಾಯಮೂರ್ತಿ) ಕೆ. ನಾಗನಗೌಡ ದಾಖಲಾತಿಗಳ ಸಮಗ್ರ ಪರಿಶೀಲನೆ ನಡೆಸಿದರು.

ದೂರು ಸಲ್ಲಿಸಿದ್ದ ಸೋಮಶೇಖರ ಸಮಕ್ಷಮವೆ ದೂರಿನಲ್ಲಿನ ಪ್ರತಿಯೊಂದು ಅಂಶಗಳ ಕುರಿತು ಕೂಲಂಕಷ ಪರಿಶೀಲನೆ ನಡೆಸಿದರು. ಕೆಲ ಕಾಮಗಾರಿಗಳ ದಾಖಲಾತಿಗಳ ಅಸಮರ್ಪಕತೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಹಾರಿಕೆ ಉತ್ತರಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಸುಬೂಬು ಉತ್ತರಗಳು ಬೇಕಿಲ್ಲ. ಎಲ್ಲ ಅಂಶಗಳಿಗೂ ದಾಖಲೆ ಸಮೇತ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಕ್ರಮ ಕೈಕೊಳ್ಳುವುದು ಅನಿವಾರ್ಯ ಎಂದರು.

ಕೆಲ ದಿನಗಳಲ್ಲಿ ಮತ್ತೊಂದು ವಿಚಾರಣೆ ದಿನಾಂಕ ನಿಗದಿಪಡಿಸಲಾಗುವುದು. ಆ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿ ಹಾಜರಿರತಕ್ಕದ್ದು. ಅಲ್ಲದೆ, ಪ್ರತಿಯೊಂದು ಕಾಮಗಾರಿಗಳ ಖುದ್ದು ಭೇಟಿ ನೀಡಿ ಭೌತಿಕ ಪರಿಶೀಲನೆ ನಡೆಸಲಾಗುವುದು. ದಾಖಲಾತಿ ಮತ್ತು ಭೌತಿಕ ಪರಿಶೀಲನೆ ನಡೆದ ನಂತರವೆ ತಪ್ಪಿತಸ್ಥರು ಯಾರು ಎಂದು ತೀರ್ಮಾನಿಸಲಾಗುವುದು ಎಂದು ದೂರು ನೀಡಿದವರಿಗೆ ವಿವರಿಸಿದರು.

ಗೋಪ್ಯತೆ ಅನಿವಾರ್ಯ: ಸಂತೆಕೆಲ್ಲೂರು ಗ್ರಾಪ ಪಂಚಾಯಿತಿ ಅವ್ಯವಹಾರ ಕುರಿತು ದೂರು ಬಂದಿತ್ತು. ಆ ಕುರಿತು ವಿಚಾರಣೆಗೆ ಬಂದಿರುವೆ. ಇನ್ನೂ ವಿಚಾರಣೆ ಹಂತದಲ್ಲಿರುವುದರಿಂದ ಈ ಪ್ರಕರಣದ ಕುರಿತು ಯಾವುದೇ ತೀರ್ಮಾನ ಬಹಿರಂಗಪಡಿಸುವುದಿಲ್ಲ. ಇನ್ನುಳಿದಂತೆ ಲಿಖಿತ, ಮೌಖಿಕ ಅಥವಾ ಇತರೆ ಮೂಲಗಳಿಂದ ಕಚೇರಿಗೆ ಮಾಹಿತಿ ಬಂದಲ್ಲಿ ಸೂಕ್ತ ತನಿಖೆ ನಡೆಸಲಾಗುವುದು ಎಂದು ಕೆ.ನಾಗನಗೌಡ ಸ್ಪಷ್ಟಪಡಿಸಿದರು.

ಓಂಬಡ್ಸ್‌ಮನ್ ಹುದ್ದೆ ಒನ್‌ಮ್ಯಾನ್ ಶೋ ಆಗಿದೆ. ಸಮರ್ಪಕ ಸಿಬ್ಬಂದಿ ಮತ್ತು ಸೌಲಭ್ಯ ಕೊರತೆ ಎದುರಿಸುತ್ತಿದ್ದೇವೆ. ತಾಂತ್ರಿಕ ಸಿಬ್ಬಂದಿ ಕೊರತೆ ಇದೆ. ಸ್ಥಳೀಯವಾಗಿ ಇರುವ ತಾಂತ್ರಿಕ ಸಿಬ್ಬಂದಿ ಬಳಸಿಕೊಳ್ಳಲು ಸೂಚಿಸಲಾಗಿದೆ. ಆದಾಗ್ಯೂ  ಸ್ಥಳೀಯ ತಾಂತ್ರಿಕ ಸಿಬ್ಬಂದಿಯೆ ಕೆಲ ಸಂದರ್ಭದಲ್ಲಿ ಆರೋಪದಲ್ಲಿ ಶಾಮೀಲಾಗಿರುವುದರಿಂದ ಪಕ್ಕದ ತಾಲ್ಲೂಕಿನ ಸಿಬ್ಬಂದಿ ಬಳಕೆಗೆ ಚಿಂತನೆ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗದ ಎಇಇ ಎಂ.ಎನ್. ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರಾಜ ಹೆಸರೂರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ, ಮುಖಂಡರಾದ ಸೋಮಶೇಖರ ಗಡಾದ, ಆದನಗೌಡ ಪಾಟೀಲ, ಸಂಗನಗೌಡ ಪಾಟೀಲ, ಶೇರಪಾಷ, ಬಸವರಾಜ ಕಡಬೂರು ಮತ್ತಿತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.