ADVERTISEMENT

ಕಾರ್ಮಿಕರ ಮೂಲ ಸೌಕರ್ಯ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 10:25 IST
Last Updated 6 ಜುಲೈ 2012, 10:25 IST

ರಾಯಚೂರು: ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ವೈಜ್ಞಾನಿಕ ಕೂಲಿ ದೊರಕಿಸಬೇಕು, ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು, ಕಾರ್ಮಿಕರಿಗೆ ಕನಿಷ್ಠ 10 ಸಾವಿರ ನಿಗದಿಪಡಿಸಬೇಕು, ನಿರಂತರ ಸ್ವರೂಪದ ಕೆಲಸಗಳಿಗೆ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದು, ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ 10ರಂದು  ಸಿ.ಐ.ಟಿ.ಯು ಕಾರ್ಮಿಕ ಸಂಘಟನೆ ಧರಣಿ ನಡೆಸಲಿದೆ ಎಂದು ಸಂಘಟನೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಕ್ಷಾ ಖಾದ್ರಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರ ಮೂಲಭೂತ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಫೆಬ್ರುವರಿ 28ರಂದು 14ನೇ ಸಾರ್ವತ್ರಿಕ ಮುಷ್ಕರ ನಡೆಸಿತ್ತು. ಈಗ ಇದೇ 10ರಂದು ಮತ್ತೆ 15ನೇ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಹೇಳಿದರು.

ಅಂದು ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಧರಣಿ ಸತ್ಯಾಗ್ರಹ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.ಕಾರ್ಮಿಕರು ನಿರಂತರ ಹೋರಾಟ ಮಾಡುತ್ತ ಬಂದರೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಪರ ಯೋಜನೆ ರೂಪಿಸಿದೇ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತ ಬಂದಿವೆ. ಕಾರ್ಮಿಕ ಕಾಯ್ದೆ ಸುಧಾರಣೆ ನೆಪದಲ್ಲಿ ಇರುವ ಕಾಯ್ದೆಗಳನ್ನೂ ತೆಗೆದು ಹಾಕುವ ಕೆಲಸ ಮಾಡುತ್ತಿವೆ. ಚುನಾವಣೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಪ್ರಣಾಳಿಕೆ ಘೋಷಣೆ ಮರೆತಿದೆ ಎಂದು ದೂರಿದರು.

ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ 9.5ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಕಾರ್ಮಿಕ ಸಂಘಟನೆಗಳ ಮುಷ್ಕರ ಬಳಿಕ ಶೇ 8.5ಗೆ ಇಳಿಕೆ ಮಾಡಿದೆ. ಈ ರೀತಿ ಕಾರ್ಮಿಕ ಹೋರಾಟಕ್ಕೆ ಯಾವುದೇ ರೀತಿ ಬೆಲೆ ಕೊಡದೇ ಇದ್ದರೂ ಕಾರ್ಮಿಕರು ಹೋರಾಟದ ಉತ್ಸಾಹ ಕಳೆದುಕೊಂಡಿಲ್ಲ. ಇದರ ಪರಿಣಾಮವನ್ನು ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಖಾಯಂ ಮಾಡಿಕೊಳ್ಳುವವರಿಗೆ ಖಾಯಂ ನೌಕರರಿಗೆ ನೀಡುವ ಎಲ್ಲ ಸೌಲಭ್ಯ ಕೊಡಬೇಕು, ಬೋನಸ್, ಭವಿಷ್ಯ ನಿಧಿ ನೀಡಲು ಇರುವ ಎಲ್ಲ ಮಿತಿಗಳನ್ನು ತೆಗೆದು ಹಾಕಬೇಕು, ಆರು ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಕೊಡಬೇಕು,  ಖಾತ್ರಿ ಇಲ್ಲದ ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ಯೋಜನೆ ಕೈ ಬಿಟ್ಟು ಖಾತ್ರಿ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಸಾರ್ವಜನಿಕ ವಲಯದ ಉದ್ದಿಮೆಗ ಷೇರು ಮಾರಾಟ ಮಾಡದೇ ಅಭಿವೃದ್ಧಿಪಡಿಸಬೇಕು, ಖಾಸಗೀಕರಣ ನಿಲ್ಲಿಸಬೇಕು. ಸಾರ್ವಜನಿಕ ವಲಯ ಉದ್ದಿಮೆ ಏರ್ ಇಂಡಿಯಾ ಅಭಿವೃದ್ಧಿ, ಆ ನೌಕರರ ಸಮಸ್ಯೆಗಳನ್ನು ಬಗ್ಗೆ ಉಪೇಕ್ಷೆ ಮಾಡಿರುವ ಕೇಂದ್ರ ಸರ್ಕಾರವು ನಷ್ಟದಲ್ಲಿರುವ ಕಿಂಗ್ ಫಿಶರ್ ಖಾಸಗಿ ವಿಮಾನ ಕಂಪೆನಿ ನೆರವಿಗೆ ಧಾವಿಸುವ ಪ್ರಯತ್ನ ಮಾಡಿದೆ. ಇದು ಕೇಂದ್ರ ಸರ್ಕಾರವು ಖಾಸಗೀಕರಣ ಪರ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ವಿವರಿಸಿದರು.

ಕಾರ್ಮಿಕ ಸಂಘಗಳ ನೋಂದಣಿಯನ್ನು 45 ದಿನದಲ್ಲಿ ಪೂರ್ಣಗೊಳಿಸಬೇಕು,  ಅಖಿಲ ಭಾರತ ಮುಷ್ಕರ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ಹಾಕಿದ ಮೊಕದ್ದಮೆ ವಾಪಸ್ ಪಡೆಯಬೇಕು, ಬೆಲೆ ಏರಿಕೆ ನಿಯಂತ್ರಿಸಲು ಅಗತ್ಯ ವಸ್ತುಗಳ ಮುಂಗಡ ವ್ಯಾಪಾರ, ಪೆಟ್ರೊಲ್, ಡಿಸೇಲ್ ಮೇಲಿನ ಸುಂಕ ರದ್ದುಪಡಿಸಬೇಕು, ಸಾರ್ವತ್ರಿಕ ರೇಶನ್ ವ್ಯವಸ್ಥೆ ಮಾಡಬೇಕು, ಬಿಪಿಎಲ್ ಕುಟುಂಬಗಳಿಗೆ ವಸತಿ, ನಿವೇಶನ ನೀಡಲು ಕ್ರಮ ಜರುಗಿಸಬೇಕು ಎಂಬುದು ಸೇರಿದಂತೆ 12 ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸಂಘಟನೆ ಜಿಲ್ಲಾಧ್ಯಕ್ಷೆ ಎಚ್ ಪದ್ಮಾ, ಜೆ.ಎಂ ಚನ್ನಬಸಯ್ಯ, ವೀರಭದ್ರ ವಕೀಲ, ಕೆ.ಜಿ ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.