ADVERTISEMENT

ಕಾಲುವೆಗೆ ನೀರಿಲ್ಲ: ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:15 IST
Last Updated 3 ಅಕ್ಟೋಬರ್ 2011, 8:15 IST

ರಾಯಚೂರು:  ತುಂಗಭದ್ರಾ ಎಡದಂಡೆ ಕಾಲುವೆ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಪೂರೈಸುತ್ತಿಲ್ಲ. ಗೇಜ್ ನಿರ್ವಹಣೆ ಅಸಮರ್ಪಕವಾಗಿದ್ದು, ಇದೇ 4ರೊಳಗೆ ಸರಿಪಡಿಸದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ತುಂಗಭದ್ರಾ ಎಡದಂಡೆ ಕಾಲುವೆ 104ನೇ ಮೈಲ್ ಕೆಳಭಾಗದ ರೈತರ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಟ್ಟು 65 ದಿನ ಕಳೆದಿದೆ. ಮೇಲ್ಭಾಗದ ರೈತರ ಬೆಳೆಗೆ ಈ ನೀರು ಪ್ರಯೋಜವಾಗಿದೆ. ಆದರೆ, ಕೆಳಭಾಗಕ್ಕೆ ಕೇವಲ 14 ದಿನ ಮಾತ್ರ ನೀರು ಹರಿಸಲಾಗಿದೆ. ಬಳಿಕ ಈವರೆಗೂ ಕಾಲುವೆ ಮೂಲಕ ನೀರು ಹರಿಸಿಲ್ಲ ಎಂದು ದೂರಿದರು.

ಈಗ ಬಿಸಿಲು ಜಾಸ್ತಿಯಾಗಿದೆ. ಬೆಳೆ ಒಣಗುತ್ತಿದೆ. ನೀರಿನ ಅವಶ್ಯಕತೆ ಇದೆ  ಕನಿಷ್ಠ ಕಾಲುವೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು 6 ಅಡಿ ಗೇಜ್ ನಿರ್ವಹಿಸಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಪೂರೈಸದೇ ಬೆಳೆ ಹಾಳಾದರೆ ಅದಕ್ಕೆ ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಅವರೆ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.
 
ಮಾನ್ವಿ ಶಾಸಕ ಹಂಪಯ್ಯ ಅವರು ಗಣೇಕಲ್ ಜಲಾಶಯದಿಂದ ರಾಯಚೂರು ತಾಲ್ಲೂಕಿನ ಹಳ್ಳಿಗಳಿಗೆ ಮಾತ್ರ ನೀರು ಹರಿಸಲಾಗುತ್ತದೆ ಎಂಬ ಹೇಳಿಕೆ ಸರಿಯಲ್ಲ. ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಳ್ಳಿಗಳು ಬರುತ್ತವೆ. ಈ ಬಗ್ಗೆ ಸಮರ್ಪಕ ಮಾಹಿತಿ ಅರಿಯದೇ ಮನಬಂದಂತೆ ಹೇಳಿಕೆ ನೀಡಿರುವುದು ವಿಷಾದನೀಯ ಎಂದರು.

ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕರೂ ಕೂಡಾ ತಮ್ಮ ಕ್ಷೇತ್ರ ವ್ಯಾಪ್ತಿಯ ರೈತರು ಎದುರಿಸುತ್ತಿರುವ ಈ ನೀರಿನ ಸಮಸ್ಯೆ ಪರಿಹಾರದ ಬಗ್ಗೆ ಈವರೆಗೂ ಗಮನಹರಿಸಿಲ್ಲ ಎಂದು ಆರೋಪಿಸಿದರು. ಜಿಪಂ ಸದಸ್ಯ ಶರಣಪ್ಪ, ಸಿದ್ಧನಗೌಡ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.