ಮಾನ್ವಿ: ಮಾನ್ವಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಸಮತಾ ಸೈನಿಕ ದಳ, ಭಾರತೀಯ ದಲಿತ ಪ್ಯಾಂಥರ್ ಹಾಗೂ ಜೈ ಕರ್ನಾ-ಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಮಾನ್ವಿ ಪಟ್ಟಣದ ಇಂದಿರಾಗಾಂಧಿ ಕಾಲೊನಿ, ಜನತಾ ಕಾಲೊನಿ ಹಿಂದುಗಡೆ ವಾಸಿಸುವ ಜನರಿಗೆ ಸಮರ್ಪಕ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಬೇಕು. ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಲ ನಿರ್ಮಲ ಯೋಜನೆ ಅಡಿಯಲ್ಲಿ ಕೈಗೊಂಡ ಕುಡಿಯುವ ನೀರಿನ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ತರಬೇತಿಯಲ್ಲಿ ನಡೆದಿರುವ ಅಕ್ರಮದ ತನಿಖೆ ನಡೆಸಬೇಕು. ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸಬೇಕು. ತಾಲ್ಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳನ್ನು ಪುನರ್ ಹಂಚಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿ ನಿರತರು ಆಗ್ರಹಿಸಿದರು.
ಜೈ ಕರವೇ ಸಂಘಟನೆಯ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ, ಸಮತಾ ಸೈನಿಕ ದಳದ ಅಧ್ಯಕ್ಷ ಹನುಮಂತಪ್ಪ ನಿಲೋಗಲ್, ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಕಾರ್ಯಾಧ್ಯಕ್ಷ ಲಕ್ಷ್ಮಣ ಜಾನೇಕಲ್, ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಯೇಸಪ್ಪ ಪೋತ್ನಾಳ, ಬಸವರಾಜ ನಕ್ಕುಂದಿ, ಸೀತಮ್ಮ, ಎಂ. ನಾಗೇಂದ್ರಪ್ಪ, ಅಮರೇಶ, ಎಂ. ಆನಂದಕುಮಾರ, ಶೇಕ್ಷಾವಲಿ, ಅಂಬಮ್ಮ, ಲಕ್ಷ್ಮೀ, ಮೀನಾಕ್ಷಮ್ಮ, ಶೈಲಜಮ್ಮ, ಯಲ್ಲಮ್ಮ, ಪರ್ವೀನ್, ಹುಸೇನಮ್ಮ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.