ADVERTISEMENT

ಕೃಷಿ ಮೇಳಕ್ಕೆ ಡಕೋಟ ಬಸ್; ಪರದಾಡಿದ ರೈತರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 7:07 IST
Last Updated 3 ಡಿಸೆಂಬರ್ 2012, 7:07 IST

ಸಿರವಾರ (ಕವಿತಾಳ): ರಾಯಚೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಲಿಂಗಸುಗೂರಿನಿಂದ ರೈತರು ಪ್ರಯಾಣಿಸುತ್ತಿದ್ದ ಸರ್ಕಾರಿ ಬಸ್ ಕೈಕೊಟ್ಟಿದ್ದರಿಂದ ಸರಿಯಾದ ಸಮಯಕ್ಕೆ ಮೇಳಕ್ಕೆ ಹೋಗಲಾಗದೆ ರೈತರು ಚಡಪಡಿಸಿದ ಘಟನೆ ಭಾನುವಾರ ನಡೆದಿದೆ.

ಲಿಂಗಸುಗೂರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕೃಷಿ ಮೇಳಕ್ಕೆ ತೆರಳುತ್ತಿದ್ದ 50ಕ್ಕೂ ಹೆಚ್ಚು ರೈತರು ರೈತ ಮಹಿಳೆಯರು ಪ್ರಯಾಣಿಸುತ್ತಿದ್ದ ಲಿಂಗಸುಗೂರ ಡಿಪೋದ ಬಸ್ ಲಿಂಗಸುಗೂರಿನಿಂದ ಸಿರವಾರ  ಅಂದಾಜು 50ಕಿ.ಮೀ ಕ್ರಮಿಸುವುದರೊಳಗೆ ನಾಲ್ಕಾರು ಬಾರಿ ಕೆಟ್ಟು ನಿಂತು ರೈತರು ಚಡಪಡಿಸುವಂತೆ ಮಾಡಿತು. ಸಿರವಾರ ಸಮೀಪದ ನವಲಕಲ್ ಗ್ರಾಮದಲ್ಲಿ ಬಸ್ ಸಂಪೂರ್ಣ ಕೆಟ್ಟು ನಿಂತಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ಮದ್ಯೆ ಅಲ್ಲಲ್ಲಿ ಬಸ್ ತಳ್ಳಾಟ ನಡೆಸಿ ಸುಸ್ತಾಗಿದ್ದಾಗಿ ರೈತರು ಹಿಡಿಶಾಪ ಹಾಕಿದರು. ಕೃಷಿ ಮೇಳಕ್ಕೆ ರೈತರನ್ನು ಕರೆದೊಯ್ಯಲು ಅಂದಾಜು ರೂ.9ಸಾವಿರ ಬಾಡಿಗೆಯನ್ನು ಕೃಷಿ ಇಲಾಖೆಯಿಂದ ಪಡೆದ ಸಾರಿಗೆ ಇಲಾಖೆ ಅಧಿಕಾರಿಗಳು ತಾಂತ್ರಿಕ ತೊಂದರೆ ಇದ್ದ ಬಸ್ ನೀಡಿದ್ದರಿಂದ ತೊಂದರೆ ಪಡುವಂತಾಯಿತು ಮತ್ತು ಬಸ್ ತೊಂದರೆ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರೂ ಸ್ಪಂದಿಸಲಿಲ್ಲ ಎಂದು ರೈತರು ಆರೋಪಿಸಿದರು. ಕೃಷಿ ಅಧಿಕಾರಿಗಳ ಮನವಿಗೂ ಜಗ್ಗದ ಡಿಪೋ ವ್ಯವಸ್ಥಾಪಕರು ರೈತರು ಮೊಬೈಲ್‌ನಲ್ಲಿ ವಾಚಾಮಗೋಚರ ಬೈಗಳಿಗೆ ಬೇರೆ ಬಸ್ ನೀಡುವುದಾಗಿ ತಿಳಿಸಿದರು.

ಇದರಿಂದ ರೋಸಿಹೋದ ಕೆಲವು ರೈತರು ತಮ್ಮ ಸ್ವಂತ ಹಣದಿಂದ ಬೇರೆ ಬಸ್‌ಗಳಲ್ಲಿ ಪ್ರಯಾಣಿಸಿದರು. ಇನ್ನೂ ಕೆಲವರು 4ಗಂಟೆ ನಂತರ ಬಂದ ಪರ್ಯಾಯ ಬಸ್‌ನಲ್ಲಿ ಕೃಷಿ ಮೇಳಕ್ಕೆ ತೆರಳಿದರು. ಕೃಷಿ ಮೇಳದಲ್ಲಿ ಕಳೆಯಬೇಕಿದ್ದ ಸಮಯ ರಸ್ತೆಯಲ್ಲಿಯೇ ಕಳೆಯಿತು ಎಂದು ರೈತರಾದ ಗುಂಡಪ್ಪ ತಡಕಲ್, ವಿರೇಶಸ್ವಾಮಿ, ಬಸವರಾಜ ಯರದೊಡ್ಡಿ, ರೇವಣಸಿದ್ದೇಶ್ವರ, ಮಲ್ಲಿಕಾರ್ಜುನಗೌಡ, ಸಿದ್ರಾಮಪ್ಪ ಗೋನವಾರ ಮತ್ತು ಅಮೇಗೌಡ ಅಸಮಧಾನ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.