ADVERTISEMENT

ಕೋಟೆ ಸ್ವಚ್ಛತೆಗೆ ಚಾಲನೆ

ರಾಮರಡ್ಡಿ ಅಳವಂಡಿ
Published 7 ಫೆಬ್ರುವರಿ 2011, 10:50 IST
Last Updated 7 ಫೆಬ್ರುವರಿ 2011, 10:50 IST

ರಾಯಚೂರು: ಆಗ ಶತ್ರುಗಳನ್ನು ಹಿಮ್ಮೆಟ್ಟಿಸಿ ಇಲ್ಲಿನ ಅರಸರು, ಪ್ರಜೆಗಳನ್ನು ಪೋಷಿಸಿದ್ದ ರಾಯಚೂರು ಐತಿಹಾಸಿಕ ಕೋಟೆ ಹಿರಿಮೆ ರಾಜ್ಯದ ಕೋಟೆ ಇತಿಹಾಸದಲ್ಲಿಯೇ ಮಹತ್ವದ್ದು. ಹಲವು ದಶಕಗಳಿಂದ ತನ್ನ ರಕ್ಷಣೆಗೆಯೇ ಕೋಟೆ ಮೊರೆ ಇಡುತ್ತಲೇ ಬಂದಿದೆ. ಇದು ನಾಗರಿಕ ಸಮಾಜದಲ್ಲಿ ಐತಿಹಾಸಿಕ ಸ್ಮಾರಕಗಳ ಬಗ್ಗೆ ಸ್ಥಳೀಯ ಆಡಳಿತ ಮತ್ತು ಜನತೆ ಅನುಸರಿಸಿದ ಅಸಡ್ಡೆ ಧೋರಣೆಯ ವಿಪರ್ಯಾಸದ ಸಂಗತಿ.

ಆದರೆ, ಕೆಲ ದಿನಗಳ ಹಿಂದೆ ‘ಐತಿಹಾಸಿಕ ಕೋಟೆ’ ರಕ್ಷಣೆಗೆ ಚಿಕ್ಕ ಪ್ರಯತ್ನ ಆರಂಭಗೊಂಡಿದೆ! ಹೌದು. ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಸೂಚನೆ ಮೇರೆಗೆ ಜಿಲ್ಲಾಡಳಿತ ಈ ಕೋಟೆ ಅಭಿವೃದ್ಧಿಗೆ 1 ಕೋಟಿ ರೂ ದೊರಕಿಸಿದೆ. ಜಾಲಿಗಿಡದ ಪೊದೆಯಲ್ಲಿ ಮುಚ್ಚಿ ಹೋಗಿದ್ದ ಐತಿಹಾಸಿಕ ಕೋಟೆ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದೆ.
ಮೊದಲ ಹಂತವಾಗಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ, ಬಸ್ ನಿಲ್ದಾಣದ ಹತ್ತಿರ, ಟಿಪ್ಪು ಸುಲ್ತಾನ ರಸ್ತೆ ಹತ್ತಿರ ಇರುವ ಕೋಟೆ ಸುತ್ತ ಹಾಗೂ ಕೋಟೆ ಮೇಲೆ ಬೆಳಿದಿದ್ದ ಜಾಲಿ ಗಿಡ ಕಡಿದು ಸ್ವಚ್ಛಗೊಳಿಸಲಾಗಿದೆ.

ಬಸ್ ನಿಲ್ದಾಣ ಹತ್ತಿರ ಇರುವ ಈ ಕೋಟೆ ಆವರಣ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಒಂದು ಶಿಲಾಶಾಸನವೂ ಪತ್ತೆಯಾಗಿದೆ. ಜಾಲಿಗಿಡದ ಪೊದೆಯಲ್ಲಿ ಮುಚ್ಚಿ ಹೋಗಿದ್ದ ಈ ಕೋಟೆಯನ್ನು ನಗರದ ಜನತೆ ಕಣ್ಣರಳಿಸಿ ದೂರದಿಂದಲೇ ನಿಂತು ನೋಡುತ್ತಿದ್ದಾರೆ.

ಕೋಟೆ ಹತ್ತಬೇಕು, ಕೋಟೆ ಸುತ್ತಬೇಕು ಎಂಬ ಆಸೆ ಅನೇಕರಿಗಿದ್ದರೂ ಇನ್ನೂ ಕೋಟೆ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿಲ್ಲದ ಕಾರಣ ಅತ್ತ ಜನ ಸುಳಿಯುತ್ತಿಲ್ಲ. ಜಾಲಿಗಿಡದ ಪೊದೆ ಮಾತ್ರ ತೆರವುಗೊಳಿಸಲಾಗಿದೆ. ಆ ಗಿಡದ ಬೇರುಗಳು ಹಾಗೆಯೇ ಉಳಿದಿವೆ. ಮಳೆಗಾಲ ಬಂದರೆ ಮತ್ತೆ ಚಿಗುರೊಡೆದು ಮತ್ತೆ ಮುಳ್ಳಿನ ಪೊದೆಯಲ್ಲಿ ಕೋಟೆ ಹುದುಗಿ ಹೋಗಬಹುದು. ಹೀಗಾಗಿ ಅವುಗಳನ್ನು ತೆರವುಗೊಳಿಸಬೇಕು ಎಂದು ಜನತೆ ಚರ್ಚೆ ಮಾಡುವ ಮೂಲಕ ಕಾಳಜಿ ಮಾತು ಆರಂಭಿಸಿದ್ದಾರೆ.

ಸದ್ಯದ ಸ್ಥಿತಿ ಅವಲೋಕಿಸಿದರೆ ಜನತೆಯ ಮಾತು ಸತ್ಯ. ಆಮೆ ವೇಗದಲ್ಲಿ ನಡೆದಿರುವ ಸ್ವಚ್ಛತಾ ಕಾರ್ಯ ಇನ್ನೂ ವೇಗ ಪಡೆಯಬೇಕಿದೆ. ಕೋಟೆ ಸೌಂದರ್ಯೀಕರಣ, ವೀಕ್ಷಣೆಗೆ ಮಾರ್ಗ ರಚನೆ, ಗಿಡಕಂಟೆಗಳು ಬೆಳೆಯದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಸದ್ಯ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ದೊರಕಿರುವ 1 ಕೋಟಿ ಅನುದಾನ ಇಡೀ ನಗರವನ್ನೇ ಸುತ್ತುವರಿದಿರುವ ಕೋಟೆ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಅತ್ಯಂತ ಕಡಿಮೆ ಮೊತ್ತ.

ಆದರೆ, ದೊರಕಿದ ಈ ಅನುದಾನದಲ್ಲಿ ಸಾಧ್ಯವಾದ ಮಟ್ಟಿಗೆ ಸ್ವಚ್ಛತಾ ಕಾರ್ಯಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿರುವುದು ಸದ್ಯಕ್ಕೆ ಕೋಟೆ ರಕ್ಷಣೆಯ ಮೊದಲ ಹೆಜ್ಜೆ ಎಂದು ಹೇಳಬಹುದು.

ಬರೀ ಕೋಟೆ ಸ್ವಚ್ಛತೆ ಮಾಡಿದರೆ ಸಾಲದು ಅತಿಕ್ರಮಣ ತೆರವು ನಡೆಯಬೇಕು. ಅಂದಾಗ ಕೋಟೆಗೆ ಸ್ಪಷ್ಟ ರೂಪ ಬರಲು ಸಾಧ್ಯವಾಗುತ್ತದೆ. ನಗರದ ಜನತೆ ಆಶಯದಂತೆ ಜಿಲ್ಲಾಡಳಿತ ಹೆಜ್ಜೆ ಇರಿಸಿದರೆ ಬೀದರ್, ಗುಲ್ಬರ್ಗ ಕೋಟೆಗಳಂತೆ ರಾಯಚೂರು ಕೋಟೆಯು ಈ ಭಾಗದ ಸುಂದರ, ಸಂರಕ್ಷಿತ ಕೋಟೆಯಾಗಿ ಗೋಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.