ADVERTISEMENT

ಜನರಿಗೆ ‘ಆರ್ಸೆನಿಕ್’ ನೀರೇ ಗತಿ

ಹರ್ವಾಪುರ: ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2013, 7:06 IST
Last Updated 28 ನವೆಂಬರ್ 2013, 7:06 IST
ಕವಿತಾಳ ಸಮೀಪದ ಹರ್ವಾಪುರದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು.
ಕವಿತಾಳ ಸಮೀಪದ ಹರ್ವಾಪುರದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು.   

ಕವಿತಾಳ: ಇಲ್ಲಿಗೆ ಸಮೀಪದ ಪಾಮನ­ಕಲ್ಲೂರು ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕುಡಿ­ಯುವ ನೀರಿನಲ್ಲಿ ಆರ್ಸೆನಿಕ್ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಗ್ರಾಮೀಣಾ­ಭಿವೃದ್ಧಿ ಸಚಿವರು ಸೇರಿದಂತೆ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಶುದ್ಧ ಕುಡಿಯುವ ನೀರು ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಆರಂಭವಾದ ಶುದ್ಧ ಕುಡಿಯುವ ನೀರಿನ ಕೆಲವು
ಘಟಕಗಳು ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತವಾಗಿವೆ.

ಇದರಿಂದಾಗಿ ಹಳ್ಳಿ ಜನರಿಗೆ ಆರ್ಸೆನಿಕ್ ನೀರೇ ಗತಿ ಎನ್ನುವಂತಾಗಿದೆ ಎಂದು ಗ್ರಾಮದ ಬಸವರಾಜಪ್ಪಗೌಡ ಆರೋಪಿಸಿದ್ದಾರೆ.

ಹರ್ವಾಪುರ ಗ್ರಾಮದಲ್ಲಿ ಅಂದಾಜು ರೂ. 6.5 ಲಕ್ಷ ಮೊತ್ತದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿ ಒಂದು ವಾರ ಮಾತ್ರ ಕಾರ್ಯ ನಿರ್ವಹಿಸಿದ್ದು ಇದೀಗ ಸ್ಥಗಿತವಾಗಿದೆ. ಆರ್ಸೆನಿಕ್ ಎಂದು ಗುರುತಿಸಲಾದ ಗ್ರಾಮದಲ್ಲಿ ಕೊಳವೆ ಬಾವಿಗಳನ್ನು ಸ್ಥಗಿತಗೊಳಿಸಲಾ­ಗಿದ್ದು, ಇದೀಗ ಗ್ರಾಮಸ್ಥರಿಗೆ ಕುಡಿ­ಯುವ ನೀರು ಮತ್ತು ಬಳಕೆ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಘಟಕ ಆರಂಭ ಮಾಡುವುದು ವಿಳಂಬ­ವಾಗಿದ್ದರಿಂದ ಕೆಲವು ದಿನಗಳ ಕಾಲ ಟ್ಯಾಂಕರ್ ಮೂಲಕ ನೀರು ಸರಬ­ರಾಜು ಮಾಡಲಾಯಿತು. ಇದೀಗ ಘಟಕವೂ ಸ್ಥಗಿತಗೊಂಡಿದ್ದು, ನೀರು ಪೂರೈಕೆಯೂ ಇಲ್ಲ ಮತ್ತು ಕೊಳವೆ ಬಾವಿಗಳನ್ನು ಬಂದ್ ಮಾಡಲಾಗಿದೆ.

ಆರ್ಸೆನಿಕ್ ಎಂದು ಗುರುತಿಸಿದ ಕೊಳವೆ ಬಾವಿಗಳನ್ನು ಅಧಿಕಾರಿಗಳು ಬಂದ್ ಮಾಡಿಸುವ ಸಂದರ್ಭದಲ್ಲಿ ಗ್ರಾಮಸ್ಥರು ತೀವ್ರ ಅಡ್ಡಿಪಡಿಸಿದ್ದರಿಂದ ಬಿಡಲಾಗಿದ್ದ ಆರ್ಸೆನಿಕ್ ಎಂದು ಗುರುತಿಸಿದ ಕೊಳವೆ ಬಾವಿಯ ನೀರನ್ನೇ ಇದೀಗ ಬಳಕೆ ಮಾಡಲಾಗುತ್ತಿದೆ. ಆಗ ಸುಮ್ಮನಿದ್ದರೆ ಈಗ ನೀರೇ ಇರುತ್ತಿರಲಿಲ್ಲ ಎಂದು ಗ್ರಾಮದ ಶಿವಣ್ಣ ಹೇಳುತ್ತಾರೆ.

ವೊಲ್ಟೇಜ್ ಸಮಸ್ಯೆಯಿಂದ ಸ್ಥಗಿತ­ವಾಗಿದೆ, ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎರಡು ತಿಂಗಳಿನಿಂದ ಸಂಸ್ಥೆಯವರು ತನಗೆ ಸಂಬಳವನ್ನು ನೀಡಿಲ್ಲ ಎಂದು ಮೇಲ್ವಿಚಾರಕ ಶಿವಗೇನಿ ಹೇಳಿದ್ದಾರೆ. ವೊಲ್ಟೇಜ್ ಸಮಸ್ಯೆ ಸರಿಪಡಿಸಿ, ನೀರು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅಕ್ವಾ ಸ್ಮಾರ್ಟ್ ಸಂಸ್ಥೆಯ ರಾಘವೇಂದ್ರ ತಿಳಿಸಿದ್ದಾರೆ.

ಆರೋಪ: ಶುದ್ಧ ನೀರು ಒದಗಿಸುವುದಾಗಿ ಕೊಳವೆ ಬಾವಿ ಸ್ಥಗಿತ ಮಾಡಲಾಯಿತು. ಇದೀಗ ಶುದ್ಧ ನೀರಿನ ಘಟಕ ಸ್ಥಗಿತವಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮದ ಭೀರಪ್ಪ, ಬಸ್ಸಪ್ಪ, ಸಿದ್ದನಗೌಡ, ಗುಂಡಪ್ಪ, ಪಿಡ್ಡಪ್ಪ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT