ADVERTISEMENT

ಜಲವಿದ್ಯುತ್ ಘಟಕ ಸ್ಥಾಪನೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:45 IST
Last Updated 22 ಅಕ್ಟೋಬರ್ 2012, 5:45 IST

ಲಿಂಗಸುಗೂರ: ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗೋಲಪಲ್ಲಿ ಬಳಿ ಹರಿಯುವ ನೀರನ್ನು ಬಳಸಿಕೊಂಡು ಬೃಹತ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಈಗಾಗಲೆ ಸರ್ವೆ ಮಾಡಲಾಗಿದೆ.

ಇಂತಹ ಘಟಕ ಸ್ಥಾಪನೆಗೆ ಅನುಮೋದನೆ ನೀಡುವ ಮೂಲಕ ಈ ಭಾಗದ ಜನತೆಗೆ ಉದ್ಯೋಗ ಸೃಷ್ಟಿಸಿ, ವಿದ್ಯುತ್ ಕ್ಷಾಮ ತಪ್ಪಿಸುವಂತೆ ಶಾಸಕ ಮಾನಪ್ಪ ವಜ್ಜಲ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಮನವಿ ಮಾಡಿದರು.

ಗುರುವಾರ ಗುಲ್ಬರ್ಗದಲ್ಲಿ ಜರುಗಿದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ರೈತರೊಂದಿಗೆ ಭೇಟಿ ಮಾಡಿದ ವಜ್ಜಲ ಅವರು, ದೇಶದಲ್ಲಿಯೆ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಬಹುದಾದ ಜಲ ವಿದ್ಯುತ್ ಘಟಕ ಸ್ಥಾಪನೆಗೆ ಅಂದಾಜು 20ಸಾವಿರ ಕೋಟಿ ಬೇಕಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ರೈತರ ಮತ್ತು ಈ ಭಾಗದ ಜನರ ಆಶಾ ಭಾವನೆಗೆ ಸ್ಪಂದಿಸುವಂತೆ ಕೋರಿದರು.

ರೈತರ ಮನವಿ: ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಅವರು ಕೂಡ ಪ್ರತ್ಯೇಕ ಮನವಿ ಸಲ್ಲಿಸಿ ವಿದ್ಯುತ್ ಕ್ಷಾಮದಿಂದ ರೈತರು ಸಮಸ್ಯೆ ಎದುರಿಸುತ್ತಿದ್ದೇವೆ. ಕಾರಣ ಕೆಲಸ ದೊರಕುವ ಜೊತೆಗ ವ್ಯರ್ಥ ಪೋಲಾಗುವ ನೀರು ಬಳಸಿ ವಿದ್ಯುತ್ ಕ್ಷಾಮ ನಿವಾರಣೆಗೆ ಸಹಕಾರಿ ಆಗಲಿದೆ ಎಂದು ವಿವರಿಸಿದರು. ಅಲ್ಲದೆ, ರೈತರಿಗೆ ನಿರಂತರ ವಿದ್ಯುತ್ ಪೂರೈಸುವ ಜೊತೆಗೆ ನಾರಾಯಣಪುರ ಅಣೆಕಟ್ಟೆ ಅಚ್ಚುಕಟ್ಟು ಪ್ರದೇಶಕ್ಕೆ ಮಾರ್ಚ 31ರ ವರೆಗೆ ನೀರು ಹರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಚಿವ ರೇವೂ ನಾಯ್ಕ ಬೆಳಮಗಿ ಉಪಸ್ಥಿತರಿದ್ದರು. ಮುಖಂಡರಾದ ಎಸ್.ಆರ್. ರಸೂಲ, ಗಿರಿಮಲ್ಲನಗೌಡ ಕರಡಕಲ್ಲ, ಹನುಮಂತಪ್ಪ ಯಡಹಳ್ಳಿ, ವೀರಭದ್ರಯ್ಯ ವಸ್ತ್ರದ, ಮಲ್ಲಿಕಾರ್ಜುನ ಕೆಂಭಾವಿ, ಮಹಾಂತಗೌಡ, ವೀರನಗೌಡ, ಗೋಪಿ ರಾಠೋಡ, ಅಮರೇಶ ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.