ADVERTISEMENT

ಡಿಕೆಶಿ, ಬೇಗ್‌ ಕೈ ಬಿಡಲು ಆಗ್ರಹಿಸಿ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:32 IST
Last Updated 7 ಜನವರಿ 2014, 6:32 IST

ರಾಯಚೂರು: ಸಚಿವ ಸಂಪುಟಕ್ಕೆ ಡಿ.ಕೆ. ಶಿವ­ಕುಮಾರ ಹಾಗೂ ರೋಷನ್ ಬೇಗ್ ಅವರನ್ನು ಸೇರಿಸಿಕೊಳ್ಳುವ ಮೂಲಕ ತಾವೇ ತೆಗೆದುಕೊಂಡ ನಿರ್ಧಾ­­ರ­ವನ್ನು ಮುಖ್ಯಮಂತ್ರಿ ಸಿದ್ದರಾ­ಮಯ್ಯ ಬದಲಿಸಿದ್ದಾರೆ. ಕೂಡಲೇ ಈ ಇಬ್ಬರೂ ಕಳಂಕಿತ ಸಚಿವರಿಬ್ಬರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭ­ಟನಾ ರ್‍ಯಾಲಿ ನಡೆಸಿದರು. ಬಳಿಕ ಜಿಲ್ಲಾ­ಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಬಂದಾಗ ಕೆಲ ಹೊತ್ತಾದರೂ ಜಿಲ್ಲಾಧಿಕಾರಿಗಳು ಬರದೇ ಇದ್ದುದರಿಂದ ಪ್ರತಿಭಟನೆ­ಕಾರರು ಆಕ್ರೋಶಗೊಂಡರು.

ಕೊನೆಗೆ ಪೊಲೀಸ್ ಬ್ಯಾರಿಕೇಡ್ ತಳ್ಳಿಕೊಂಡು ಜಿಲ್ಲಾಧಿಕಾರಿ ಕಚೇರಿ ಕೊಠಡಿಯತ್ತ ನುಗ್ಗಲು ಮುಂದಾ­ದರು. ಅವರನ್ನು ಪೊಲೀಸರು ತಡೆ­ಯಲು ಮುಂದಾಗುವಷ್ಟರಲ್ಲಿ ಜಿಲ್ಲಾಧಿ­ಕಾರಿ ಎಸ್.ಎನ್ ನಾಗರಾಜು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ನಾಗರಾಜ ಅವರು ಬಂದು ಮನವಿ ಸ್ವೀಕರಿಸಿದರು.

ಮನವಿ ವಿವರ: ತಮ್ಮದು ಪರಿಶುದ್ಧ, ಪ್ರಾಮಾಣಿಕ ಮಂತ್ರಿಮಂಡಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ­ಕೊಂಡಿದ್ದರು. ಆದರೆ, ತಮ್ಮ ಹೇಳಿಕೆ­ಯನ್ನೇ ಮರೆತು ಈಗ ಕಳಂಕಿತರಾದ ಡಿ.ಕೆ ಶಿವಕುಮಾರ ಮತ್ತು ರೋಷನ್ ಬೇಗ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷವು ಈ ಹಿಂದೆ ಕಳಂಕಿತ ಸಂತೋಷ ಲಾಡ್ ಅವರ ರಾಜೀನಾಮೆಗೆ ಒತ್ತಾಯ, ಹೋರಾಟ ಮಾಡಿದಾಗ ಅವರಿಂದ ಮುಖ್ಯಮಂತ್ರಿ ರಾಜೀನಾಮೆ ಪಡೆದಿ­ದ್ದರು. ಈಗ ಮತ್ತೆ ಇಬ್ಬರು ಕಳಂಕಿತ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾತು ಮತ್ತು ಕೃತಿಗಳಲ್ಲಿ ಭಿನ್ನವಾಗಿ ನಡೆದುಕೊಳ್ಳುವ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಮುಖ್ಯಮಂತ್ರಿ ರೂಢಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ತಾವು ನುಡಿದಂತೆ ನಡೆಯಬೇಕು. ಕಳಂಕಿತರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು, ಈ ಹಿಂದೆ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಬಿಜೆಪಿ ಸಚಿವರ ಮೇಲೆ ಸಣ್ಣ ಆರೋಪ ಬಂದಾಗ ಹರಿಹಾಯುತ್ತಿದ್ದ ರಾಜ್ಯಪಾಲರು ಈಗ ಕೂಡಲೇ ಮಧ್ಯಪ್ರವೇಶಿಸಬೇಕು. ಈ ಕಾಂಗ್ರೆಸ್ ಸರ್ಕಾರದಲ್ಲಿನ ಕಳಂಕಿತ ಸಚಿವರನ್ನು ಸಂಪುಟದಿಂದ ಕೈ ಬಿಡಲು ಸೂಚಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ಬಿಜೆಪಿ ಎಸ್‌ಸಿ ಘಟಕದ ರಾಜ್ಯ ಉಪಾಧ್ಯಕ್ಷ ಆರ್. ತಿಮ್ಮಯ್ಯ, ಪಕ್ಷದ ಮುಖಂಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಗಸ್ತಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶರಣಮ್ಮ ಕಾಮರೆಡ್ಡಿ, ರಮಾನಂದ ಯಾದವ, ಬಂಡೇಶ ವಲ್ಕಂದಿನ್ನಿ, ನರಸಪ್ಪ ಯಕ್ಲಾಸಪುರ, ನಾರಾಯಣ­ರಾವ ಕುಲಕರ್ಣಿ, ರಾಮಚಂದ್ರ ನಾಯಕ, ರಾಮಚಂದ್ರ ಕಡಗೋಲ, ಎ ಚಂದ್ರಶೇಖರ, ವಿ ಗೋವಿಂದ, ಬಿ.ಎಸ್ ಸುರಗಿಮಠ, ಬಂಗಿ ನರಸರೆಡ್ಡಿ, ಆಂಜನೇಯ ಯಕ್ಲಾಸಪುರ, ಮುಕ್ತಾರ್, ರಮೇಶ, ರವಿ ರಾಘ­ವೇಂದ್ರ, ರಾಮಕಿಶೋರ,  ಆಶ್ವಥ್ ರಾಜಪುರೋಹಿತ, ಕರಿಯಪ್ಪ ನಾಯಕ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.