ಲಿಂಗಸುಗೂರ: ಪಟ್ಟಣದಾದ್ಯಂತ ನೂರಕ್ಕೂ ಹೆಚ್ಚು ಕೃಷಿ ಜಮೀನುಗಳು, ಕೃಷಿಯೇತರ ಜಮೀನುಗಳಾಗಿ ಪರಿವರ್ತಿತಗೊಂಡಿವೆ. ಆ ಕೃಷಿಯೇತರ ಜಮೀನಿನಲ್ಲಿ ನಗರ ಯೋಜನಾ ಇಲಾಖೆ ನಿಗದಿ ಪಡಿಸಿದ ಉದ್ಯಾನವನ ಮತ್ತು ನಾಗರಿಕ ಸೌಲಭ್ಯದ ಹೆಸರಿನಲ್ಲಿ ಕಾಯ್ದಿರಿಸಿದ ಜಾಗೆಗಳ ದುರ್ಬಳಕೆ ಪ್ರಕರಣಗಳು ಗಮನಕ್ಕೆ ಬಂದಿವೆ. ಆ ಕುರಿತು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲಿಯೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್ ಎಚ್ಚರಿಕೆ ನೀಡಿದ್ದಾರೆ.
ಹುಲಿಗುಡ್ಡ ಗ್ರಾಮದ ಕೃಷಿಯೇತರ ಜಮೀನಿಗೆ ನಗರ ಯೋಜನಾ ಇಲಾಖೆ ನೀಲನಕ್ಷೆಗೆ ಅನುಮತಿ ನೀಡಿದೆ. ಆ ಬಡಾವಣೆಯಲ್ಲಿ ಕಾಯ್ದಿರಿಸಿದ್ದ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ಜಾಗೆಗೆ ಅಕ್ರಮವಾಗಿ ನಿವೇಶನ ಸೃಷ್ಟಿಸಿ ಖೊಟ್ಟಿ ದಾಖಲೆ ಸಿದ್ಧಪಡಿಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆ ಕುರಿತು ಮೂಲ ದಾಖಲೆ ಮತ್ತು ಖೊಟ್ಟಿ ದಾಖಲೆಗಳ ಪರಿಶೀಲನೆ ನಡೆದಿದ್ದು ಮೇಲ್ನೊಟಕ್ಕೆ ಸಾಬೀತಾಗಿದೆ. ದಾಖಲೆ ಸಂಗ್ರಹಿಸಿ ಕ್ರಮ ಕೈಕೊಳ್ಳಲಾಗುವುದು ಎಂದು ವಿವರಿಸಿದರು.
ಹುಲಿಗುಡ್ಡದ ಜಮೀನೊಂದರಲ್ಲಿ ನಗರ ಯೋಜನಾ ಇಲಾಖೆ 38 ನಿವೇಶನಗಳಿಗೆ ಅನುಮತಿ ನೀಡಿದೆ. ಆ ಅನುಮತಿ ಆಧರಿಸಿ ಪುರಸಭೆ ಆಡಳಿತ ಮಂಡಳಿ ಕೂಡ ಅನುಮತಿ ನೀಡಿದ ನೀಲನಕ್ಷೆ ಪುರಸಭೆ ಕಚೇರಿಯಲ್ಲಿ ಲಭ್ಯವಿದೆ. ಆದರೆ, ಅಂತಹುದೆ ಖೊಟ್ಟಿ ನೀಲನಕ್ಷೆ ಸಿದ್ಧಪಡಿಸಿ ಉದ್ಯಾನವನ ಮತ್ತು ನಾಗರಿಕ ಸೌಲಭ್ಯದ ಜಾಗೆಗೆ ಅಂದಾಜು 10 ಅನಿಯಮಿತ ನಿವೇಶನಗಳ ಸಂಖ್ಯೆ ನೀಡಲಾಗಿದೆ. ಪುರಸಭೆ ಸಿಬ್ಬಂದಿ ಕೂಡ ನಂಬರ ನೀಡಿದ್ದು ಪರಿಶೀಲನೆ ಆರಂಭಿಸಲಾಗಿದೆ ಎಂದರು.
ಬಹುತೇಕ ಬಡಾವಣೆಗಳಲ್ಲಿ ಮೀಸಲಿಟ್ಟ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ಜಾಗೆಗಳಿಗೆ ಪುರಸಭೆ ಕೆಲ ಸಿಬ್ಬಂದಿ ಶ್ಯಾಮೀಲಾಗಿ ಅಕ್ರಮ ಖಾತಾ ನಂಬರ ನೀಡಿ ದಾಖಲೆ ಸೃಷ್ಟಿಸುತ್ತಿದ್ದಾರೆ. ಪ್ರತಿಷ್ಠಿತ ಮಧ್ಯವರ್ತಿಗಳು ಲಕ್ಷಾಂತರ ಹಣದ ಆಮಿಷ ತೋರಿಸಿ ನಗರ ಯೋಜನಾ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ನಕಲಿ ರುಜು, ಸೀಲು ಸೃಷ್ಟಿಸಿ ಮೂಲ ದಾಖಲೆಯಂತೆಯೆ ಖೊಟ್ಟಿ ದಾಖಲೆ ಸಿದ್ಧಪಡಿಸಿ ಜನಸಾಮಾನ್ಯರನ್ನು ವಂಚಿಸುತ್ತಿದ್ದಾರೆ ಎಂಬ ದೂರುಗಳು ತಮಗೆ ಬಂದಿವೆ ಎಂದು ಹೇಳಿದರು.
ಈಗಾಗಲೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಪುರಸಭೆ ವ್ಯಾಪ್ತಿಯಲ್ಲಿ ಇದುವರೆಗು ಆಗಿರುವ ಲೇಔಟ್‌ಗಳ ನೀಲನಕ್ಷೆ, ಕಾಯ್ದಿರಿಸಿದ ಉದ್ಯಾನವನ ಮತ್ತು ನಾಗರಿಕ ಸೌಲಭ್ಯದ ಜಾಗೆಗಳ ವಾಸ್ತವ ಚಿತ್ರಣ ಕುರಿತು ಮೂಲ ನಕ್ಷೆ ಆಧರಿಸಿ ಮಾರ್ಚ 31ರೊಳಗೆ ವರದಿ ನೀಡಲು ತಾಕೀತು ಮಾಡಲಾಗಿದೆ. ಇದಕ್ಕೆ ಪುರಸಭೆ ಅಧಿಕಾರಿಗಳು ಸಹಕಾರ ನೀಡದೆ ಹೋದಲ್ಲಿ ನಗರ ಯೋಜನಾ ಇಲಾಖೆ ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.