ADVERTISEMENT

ತಹಸೀಲ್ದಾರರ ವಿವರ ಕೇಳಿ ಸುಸ್ತಾದ ಶಾಸಕ !

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 7:00 IST
Last Updated 22 ಫೆಬ್ರುವರಿ 2011, 7:00 IST

ಸಿಂಧನೂರು: ರೈತರ ಪಹಣಿಯಲ್ಲಿ ನಾಲ್ಕು ಎಕರೆ ಜಮೀನನ್ನು ನಮೂದಿಸಿದ್ದರೆ ಜಾಗದಲ್ಲಿ ನಾಲ್ಕುವರೆ ಎಕರೆ ಜಮೀನು ಇರುತ್ತದೆ. ನಾಲ್ಕು ಎಕರೆ ಪಹಣಿಯಲ್ಲಿದ್ದರೆ ಜಾಗದಲ್ಲಿ ಮೂರು ಎಕರೆ ಇರುವ ಪ್ರಕರಣಗಳು ತಾಲ್ಲೂಕಿನಲ್ಲಿ ಸಾವಿರಾರು.

ರಾಜ್ಯದಲ್ಲಿಯೇ ಪಹಣಿ ತಿದ್ದುಪಡಿ ಸಮಸ್ಯೆಯಲ್ಲಿ ಮೊದಲ ಸ್ಥಾನ ಪಡೆದಿರುವ ಸಿಂಧನೂರು ತಾಲ್ಲೂಕಿನಲ್ಲಿ ನಕಾಶೆ ಸಿದ್ಧವಾಗಲು ಕಾಯ್ದಿರುವ ಅರ್ಜಿಗಳು ಎರಡು ಸಾವಿರಕ್ಕೂ ಹೆಚ್ಚು. ಜಮೀನು ಖರೀದಿ, ವಿಭಾಗಪತ್ರ, ಪೋತಿ ವಿರಾಸತ ಮತ್ತಿತರ ಉದ್ದೇಶಗಳಿಗೆ 11ಇ ನಕಾಶೆ ಬೇಕೆ ಬೇಕು. ಭೂಮಾಪನ ಇಲಾಖೆ ಮತ್ತು ತಹಸೀಲ್ದಾರರ ಬಳಿ ಅಲೆದಲೆದು ಸಾಕಾಗಿ ನೂರಾರು ರೈತರು ಶಾಸಕ ವೆಂಕಟರಾವ್ ನಾಡಗೌಡರ ಮೊರೆ ಹೋದ ಹಿನ್ನೆಲೆಯಲ್ಲಿ ಕೆ.ಡಿ.ಪಿ ಸಭೆಯಲ್ಲಿ ಈ ವಿಷಯವನ್ನು ಶಾಸಕರು ಪ್ರಸ್ತಾಪಿಸುವ ಮೂಲಕ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದರು.
ಶಾಸಕರು ಭೂಮಾಪನ ವಿಷಯ ಎತ್ತಿದಾಕ್ಷಣ ಮೈಕ್ ಪಡೆದ ತಹಸೀಲ್ದಾರ್ ಡಾ.ಶರಣಪ್ಪ ಸತ್ಯಂಪೇಟೆ ಸುಮಾರು ಅರ್ಧ ತಾಸು ಕಾಲ ನಕಾಶೆ ಸಿದ್ಧವಾಗಲು ಇರುವ ಪ್ರಕ್ರಿಯೆಗಳ ಕುರಿತು ವಿವರಿಸಿದರು. ಆದಾಗ್ಯೂ ಶಾಸಕರಿಗಾಗಲಿ, ಸಭೆಯ ಯಾರೊಬ್ಬರಿಗೂ ಹೇಳಿದ ವಿಷಯ ಅರ್ಥವಾಗಲೇ ಇಲ್ಲ.

ನಕಾಶಕೋರಿ ಬಂದ 4,941 ಅರ್ಜಿಗಳಲ್ಲಿ 1,161 ಪಹಣಿ ತಿದ್ದುಪಡಿ ಸ್ಥಿತಿಯಲ್ಲಿವೆ. 835 ಅರ್ಜಿಗಳನ್ನು ತಿದ್ದುಪಡಿ ಮಾಡಲಾಗಿದೆ.  ಅಲ್ಲದೇ ಭೂಮಾಪನ ಇಲಾಖೆಯ ಸೂಪರ್ ವೈಸರ್ ವಿಶ್ವನಾಥ ಅಂಕದ ಅವರು ನೀಡಿದ ವಿವರಗಳನ್ನು ತಹಸೀಲ್ದಾರರು ಒಪ್ಪಲಿಲ್ಲ. ಕೇವಲ 8 ಕಡತಗಳು ಮಾತ್ರ ನಮ್ಮ ಬಳಿ ಇವೆ. ಇನ್ನುಳಿದ ಕಡತಗಳು ಪಹಣಿ ತಿದ್ದಪಡಿ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಇರುತ್ತವೆ ಎಂದು ಶಾಸಕರನ್ನೂ ಮನವೊಲಿಸಲು ಪ್ರಯತ್ನಿಸಿದರು.

ಹದಿನೈದು ದಿನದೊಳಗೆ ಭೂಮಾಪನಾ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಡತಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಾಲಮ್ಮ ನಾಗಪ್ಪ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಶರಣಬಸವರಾಜ, ತಹಸೀಲ್ದಾರರ ಡಾ.ಶರಣಪ್ಪ ಸತ್ಯಂಪೇಟೆ. ಉಪಾಧ್ಯಕ್ಷ ಶಂಬುಲಿಂಗಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.