ADVERTISEMENT

ದಿದ್ದಗಿ ಗ್ರಾಮ ಸಮಸ್ಯೆಗಳ ಆಗರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 7:06 IST
Last Updated 18 ಮಾರ್ಚ್ 2014, 7:06 IST

ಸಿಂಧನೂರು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ, ಕುಡಿಯುವ ನೀರಿನ ಟ್ಯಾಂಕ್ ಇದ್ದರೂ ನಿರುಪಯುಕ್ತ, ರಸ್ತೆ ತುಂಬಾ ಬರೀ ತಗ್ಗು ದಿನ್ನೆಗಳು ಕಾಣಸಿಗುತ್ತವೆ. ಇದು ತಾಲ್ಲೂಕಿನ ರಾಮತ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಿದ್ದಗಿ ಗ್ರಾಮದ ಅಯೋಮಯ ಸ್ಥಿತಿ.

ಜವಳಗೇರಿಯಿಂದ ದಿದ್ದಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆಗೆ ಮರಮ್‌ ಹಾಕಿ ಹಾಗೆ ಬಿಟ್ಟಿರುವುದರಿಂದ ಮಳೆ ನೀರಿಗೆ ಮಣ್ಣು ಕೊಚ್ಚಿಹೋಗಿ ಅಲ್ಲಲ್ಲಿ ದೊಡ್ಡ- ಕಂದಕ ಬಿದ್ದಿವೆ. ಮಳೆಗಾಲದಲ್ಲಿ ಹಳ್ಳದ ನೀರು ಹರಿಯಲು ನಿರ್ಮಿಸಿದ ಸಿಮೆಂಟ್ ಗೋಡೆ ಮತ್ತು ಕಾಂಕ್ರಿಟ್ ನೆಲಹಾಸು ಕಿತ್ತು ಹೋಗಿ ಬೊಂಗಾ ಬಿದ್ದಿವೆ. ದಿದ್ದಿಗಿಯಿಂದ ಜವಳಗೇರಿ ಕೆವಲ 7 ಕಿ.ಮೀ ದೂರವಿದೆ. ಆದರೆ, ರಸ್ತೆ ಹದಗೆಟ್ಟ ಕಾರಣ ಇಲ್ಲಿನ ಗ್ರಾಮಸ್ಥರು 12 ಕಿ.ಮೀ ದೂರವಿರುವ ಪೋತ್ನಾಳ ಮೂಲಕ ನಗರಕ್ಕೆ ಪ್ರಯಾಣಿಸಬೇಕು.

ಕುಡಿಯುವ ನೀರು:ಗ್ರಾಮದ ಪಕ್ಕದಲ್ಲಿರುವ ಹಳ್ಳದಿಂದ ಕುಡಿಯುವ ನೀರಿನ ಮೇಲ್ತೊಟ್ಟಿಗೆ ಸಂಪರ್ಕ ಕಲ್ಪಿಸಲಾಗಿದೆ. ಯಾವುದೇ ಶುದ್ಧೀಕರಣ ವ್ಯವಸ್ಥೆ ಇಲ್ಲದೆ ನೀರು ಸರಬರಾಜು ಮಾಡಲಾಗುತ್ತಿದೆ. ಪ್ಲೋರೈಡ್‌ಯುಕ್ತ ನೀರನ್ನೆ ಸೇವಿಸುತ್ತಿರುವ ಜನರು ಮೈ, ಕೈನೋವು ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ಕಾಯಿಲೆಗಳಿಂದ ಬಳಲುವುದು ಸಾಮಾನ್ಯವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹಳ್ಳ ಬತ್ತಿದಾಗ ಒರತೆಯೇ ತಮಗೆ ಗತಿ. ಪ್ಲೊರೈಡ್‌ ನೀರನ್ನೇ ಕುಡಿಯುವ ಸ್ಥಿತಿ ಇದೆ ಎಂದು ಗ್ರಾಮದ ಮರಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶೌಚಾಲಯ ಇಲ್ಲ: ಗ್ರಾಮದಲ್ಲಿ ಮಹಿಳಾ ಶೌಚಾಲಯ ಸಮರ್ಪಕವಾಗಿಲ್ಲದೇ ಬಹಿರ್ದೆಸೆಗೆ ಮಹಿಳೆಯರು ಕತ್ತಲಾಗುವುದನ್ನು ಕಾಯಬೇಕಾಗಿದೆ. ಬ್ಯಾಸಿಗ್ಯಾಗ್‌ ಹೆಂಗಾರ್‌ ಹೋಗ್ತೀವ್ರಿ, ಆದ್ರೆ ಮಳಿಗಾಲದಾಗ ರಾತ್ರಿ ಹೊರಗಡಿ ಹೋಗಬೇಕಂದ್ರ ಜೀವಾ ರುಮ್ ಅಂತೈತಿ. ಓಣೀ ಹೆಣ್ಮಕ್ಳೆಲ್ಲ ನಾಕಾರ ಸರ್ತಿ ಪಾಯಿಖಾನಿ ಕಟ್ಸಿರ್ರಿ ಅಂದ್ರ ಗಮನ ಕೊಟ್ಟಿಲ್ಲ ಎಂದು ಗ್ರಾಮದ ಸಾವಿತ್ರಮ್ಮ ಆರೋಪಿಸಿದರು.

ಚರಂಡಿ ವ್ಯವಸ್ಥೆ: ಓಣಿ–ಓಣಿಗೂ ಸಿ.ಸಿ.ರಸ್ತೆ ಮಾಡಿಸಲಾಗಿದೆ. ಆದರೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದಾಗಿ ಅಲ್ಲಲ್ಲಿ ಕಲುಷಿತ ನೀರು ರಸ್ತೆ ಮೇಲೆ ಹರಿದು ಪಾದಚಾರಿಗಳು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿಯೂ ತಿಪ್ಪೆಗುಂಡಿಗಳಿದ್ದು, ನೈರ್ಮಲ್ಯ ವಾತಾವರಣ ಹದಗೆಟ್ಟಿದೆ.

ನಿರ್ಲಕ್ಷ್ಯ : ರಾಮತ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಕನಿಷ್ಠ ಮೂಲ ಸೌಕರ್ಯಗಳೂ, ಗಗನ ಕುಸುಮವಾಗಿರುವುದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.

‘ಜನಪ್ರತಿನಿಧಿಗಳ ನಿರ್ಲಕ್ಷ್ಯ’
ರಸ್ತೆ, ಶುದ್ಧ ಕುಡಿಯುವ ನೀರಿನ ಸರಬರಾಜು ಇನ್ನಿತರೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಶೌಚಾಲಯಲವಿಲ್ಲದೆ ಮಹಿಳೆಯರು ಅನುಭವಿಸುತ್ತಿರುವ ಯಾತನೆ ನೀಜಕ್ಕೂ ಅಮಾನವೀಯ.
ಅಮೀನಪಾಷಾ ದಿದ್ದಿಗಿ, ರೈತ ಮುಖಂಡರು.

‘ಸಮರ್ಪಕ ರಸ್ತೆಯೇ ಇಲ್ಲ’
ಜವಳಗೇರಿ ಹೊರ ಭಾಗದಲ್ಲಿ ದಿದ್ದಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಗೆ ಅಲ್ಲಲ್ಲಿ ಕಂಕರ್ಗಳನ್ನು ಹಾಕಲಾಗಿದೆ. ಆದರೆ ಮರಮ್‌ ಹಾಕಿ ಸಿಸಿ ರಸ್ತೆ ಮಾಡುವ ಕಾರ್ಯ ವಿಳಂಬವಾಗಿದೆ. ಖಾಸಗಿ ಗಾಡಿಯಲ್ಲಿ ಹೋಗೋಣವೆಂದರೆ ರಸ್ತೆಯೂ ಇಲ್ಲ. ಬಸ್‌ ಸಂಚಾರವೇ ಇಲ್ಲದಾಗಿದೇ. 
-–ಸೋಮೇಶ ಸ್ಥಳೀಯ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.