ADVERTISEMENT

ದುಬಾರಿ ಶುಲ್ಕ-ವಂತಿಗೆ ರದ್ದತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 5:57 IST
Last Updated 2 ಜುಲೈ 2013, 5:57 IST

ರಾಯಚೂರು: ವಂತಿಗೆ ಹಾಗೂ ದುಬಾರಿ ಶುಲ್ಕ ರದ್ದಾಗಬೇಕು, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘನೆ ಮಾಡಿದ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ಜಿಲ್ಲಾ ಸಮಿತಿ ರಾಜ್ಯಪಾಲರಿಗೆ ಮನವಿ ಮಾಡಿದೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರಿಗೆ ಸಂಘಟನೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

ಖಾಸಗಿ ಮತ್ತು ವಿದೇಶಿ ವಿವಿ ರದ್ದುಪಡಿಸಬೇಕು ಮತ್ತು ಅಲ್ಲಿನ ಭ್ರಷ್ಟಾಚಾರ ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಬೇಕು, ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆ ಭರ್ತಿ ಮಾಡಬೇಕು. ಕಾರ್ಪೋರೇಟ್ ಶಿಕ್ಷಣದ ವ್ಯವಸ್ಥೆ ತೊಲಗಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಮಾನಸಿಕ, ಬೌದ್ಧಿಕ ಕಿರುಕುಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಗುತ್ತಿಗೆ ಶಿಕ್ಷಕರ ನೇಮಕಾತಿ ಕೈ ಬಿಡಬೇಕು, ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು, ಎಲ್ಲರಿಗೂ ಸಮಾನ ಮತ್ತು ಕಡ್ಡಾಯ ಶಿಕ್ಷಣ ಜಾರಿ ಮಾಡಬೇಕು, ಕರ್ನಾಟಕ ರಾಜ್ಯ ಮುಕ್ತ ವಿವಿ ಭ್ರಷ್ಟಾಚಾರದ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದವೆು ದಾಖಲು ಮಾಡಬೇಕು ಎಂದು ಹೇಳಿದರು.

ಸಂಘಟನೆ ಜಿಲ್ಲಾಧ್ಯಕ್ಷ ಎಚ್ ಬಸವರಾಜ ಕವಿತಾಳ, ಕಾರ್ಯದರ್ಶಿ ನಾಗರಾಜ ಪೂಜಾರ, ಖಜಾಂಚಿ ಕೆ ರವಿಕುಮಾರ, ಉಪಾಧ್ಯಕ್ಷ ರವಿಕುಮಾರ ಮಡಿವಾಳ ನೇತೃತ್ವವಹಿಸಿದ್ದರು. ಮೌನೇಶ ತೋರಣದಿನ್ನಿ, ಅಶೋಕ ತಡಕಲ್, ಆದಿ ನಗನೂರು, ಎಚ್ ಮೌನೇಶ, ಮಲ್ಲೇಶ ರಾಂಪುರ, ಆನಂದ, ಸುರೇಶ ನಾಯಕ, ಜಂಬಣ್ಣ ಮಡಿವಾಳ, ಆಲ್ತಾಫ ಹುಸೇನ್, ಮಹೇಶಕುಮಾರ, ನರೇಶ, ಶಂಕರ ಮಡಿವಾಳ, ರುದ್ರ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.