ADVERTISEMENT

ದೇವದುರ್ಗ ಎಪಿಎಂಸಿ: ಮೂಲಸೌಕರ್ಯ ಮರೀಚಿಕೆ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 8:07 IST
Last Updated 13 ಡಿಸೆಂಬರ್ 2012, 8:07 IST
ದೇವದುರ್ಗ ಎಪಿಎಂಸಿ ಅವರಣದಲ್ಲಿ ಆರು ವರ್ಷದಿಂದ ನಿರ್ಮಾಣ ಹಂತದಲ್ಲೆ ಉಳಿದುಕೊಂಡ ಸಾಂಸ್ಕೃತಿಕ ಭವನದ ಕಟ್ಟಡ; ಇದೀಗ ಅನ್ಯ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ
ದೇವದುರ್ಗ ಎಪಿಎಂಸಿ ಅವರಣದಲ್ಲಿ ಆರು ವರ್ಷದಿಂದ ನಿರ್ಮಾಣ ಹಂತದಲ್ಲೆ ಉಳಿದುಕೊಂಡ ಸಾಂಸ್ಕೃತಿಕ ಭವನದ ಕಟ್ಟಡ; ಇದೀಗ ಅನ್ಯ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ   

ದೇವದುರ್ಗ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯನ್ನು ಅಭಿವೃದ್ಧಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಅನುದಾನ ನೀಡಿದ್ದರೂ, ಅನುಷ್ಠಾನ ಹಂತದಲ್ಲೆ ಕಾಮಗಾರಿಗಳು ಅರ್ಥ ಕಳೆದುಕೊಂಡಿವೆ!

20 ವರ್ಷಗಳಿಂದಲೂ ಅಭಿವೃದ್ಧಿ ಹಂತದಲ್ಲೆ ಉಳಿದುಕೊಂಡಿರುವ ಎಪಿಎಂಸಿ ಪ್ರದೇಶ, ಇಂದಿಗೂ ಪೂರ್ಣಸ್ವರೂಪದಲ್ಲಿ ರೈತರಿಗೆ ಅನುಕೂಲ ಒದಗಿಸಿಲ್ಲ. ಇರುವ ಕಟ್ಟಡಗಳಿಗೆ ಸುಣ್ಣ, ಬಣ್ಣ ಬಳಿಯುವುದನ್ನು ಬಿಟ್ಟರೆ ಅರ್ಧದಲ್ಲೆ ಉಳಿದುಕೊಂಡ ಕಾಮಗಾರಿಗೆ ಪೂರ್ಣರೂಪ ಕೊಡುವ ಯತ್ನ ನಡೆಯುತ್ತಿಲ್ಲ ಎಂಬುದು ರೈತರ ಆರೋಪ.

ಈವರೆಗೂ ಜಿಲ್ಲಾ ಕೃಷಿ ಮಾರುಕಟ್ಟೆ ಆಡಳಿತದ ಸಹಭಾಗಿತ್ವದಲ್ಲಿ ಎಪಿಎಂಸಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು. ತಾಲ್ಲೂಕಿನಿಂದ ಪ್ರತಿ ಐದು ವರ್ಷಕ್ಕೂಮ್ಮೆ ಐದು ಜನ ನಿರ್ದೇಶಕರನ್ನು ಚುನಾಯಿಸಿ ಕಳುಹಿಸಲಾಗುತ್ತಿದೆ. ಆದರೆ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಕಡೆ ಹೆಚ್ಚಿನ ಗಮನ ಹರಿಸಿ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎನ್ನುವ ಅಂಶ ಗಮನ ಸೆಳೆಯುತ್ತಿದೆ.

ಅವ್ಯವಸ್ಥೆಯನ್ನು ಸರಿಪಡಿಸುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅನುದಾನ ವಿಷಯದಲ್ಲಿ ಎಪಿಎಂಸಿ ಚರ್ಚೆಗೆ ಗ್ರಾಸ ಒದಗಿಸುತ್ತಾ ಬರುತ್ತಿದೆ ಎಂಬುದು ಗಮನಾರ್ಹ.

ಪ್ರತಿವಾರ ದನಗಳ ಸಂತೆ ಭರ್ಜರಿಯಾಗಿ ನಡೆಯುತ್ತಿದೆ. ಇದರಿಂದ ಎಪಿಎಂಸಿಗೆ ಒಂದಿಷ್ಟು ಆದಾಯ ಖಂಡಿತ ಇದೆ. ಆದರೆ ದನಕರುಗಳಿಗೆ ಹಾಗೂ ಅವುಗಳನ್ನು ತರುವ ರೈತರಿಗಾಗಿ ಒಂದಿಷ್ಟು ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಎಪಿಎಂಸಿ ಆಡಳಿತ ಮಂಡಳಿ ಮಾಡಿಲ್ಲ.
ದನಕರುಗಳಿಗೆ ನೀರಿನ ವ್ಯವಸ್ಥೆ ಮಾಡಲಾಗದಷ್ಟು ಆಡಳಿತ ಮಂಡಳಿ ನಿಶ್ಯಕ್ತವಾಗಿದೆ. ಬೇಸಿಗೆಯಲ್ಲಿ ದನಕರುಗಳಿಗೆ ನೀರು ತರಲು ರೈತರು ಪರದಾಡುವುದು ಸಾಮಾನ್ಯ ಚಿತ್ರಣ.

ಉರಿಯದ ಹೈಮಾಸ್ ದೀಪ: ನಾಲ್ಕು ವರ್ಷದ ಹಿಂದೆ ಇಡೀ ಎಪಿಎಂಸಿ ಅವರಣದಲ್ಲಿನ ಮುಖ್ಯ ರಸ್ತೆಯಲ್ಲಿ ಲಕ್ಷಗಟ್ಟಲೇ ಖರ್ಚು ಮಾಡಿ ಹೈಮಾಸ್ಟ್ ದೀಪದ ಕಂಬಗಳನ್ನು ಅಳವಡಿಸಲಾಗಿದೆ. ಅಳವಡಿಸಿದ ದಿನದಿಂದ ಇಲ್ಲಿವರಿಗೂ ದೀಪ ಹತ್ತಿದ ಉದಾಹರಣೆ ಇಲ್ಲ.

ನೇಮಕ: ಈಚೆಗೆ ಸರ್ಕಾರ ದೇವದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಜಿಲ್ಲಾಸಾಹಭಾಗಿತ್ವದಿಂದ ಪ್ರತ್ಯೇಕಗೊಳಿಸಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರನ್ನು ಸಹ ಸರ್ಕಾರ ನೇಮಗೊಳಿಸಿ ಆದೇಶಿಸಿದ್ದು, ಮುಂದಾದರೂ ನೂತನ ಆಡಳಿತ ಮಂಡಳಿಯು ಸಮಸ್ಯೆಗಳ ತಾಣವಾಗಿರುವ ಎಪಿಎಂಸಿ ಕಡೆ ಗಮನ ಹರಿಸುತ್ತಾರೆಯೆ ಎಂಬುದನ್ನು ರೈತರು ಕಾದು ನೋಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.