ADVERTISEMENT

ದೇವದುರ್ಗ ತಾಲ್ಲೂಕಿಗೆ ರೂ. 750 ಕೋಟಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 8:50 IST
Last Updated 12 ಸೆಪ್ಟೆಂಬರ್ 2011, 8:50 IST

ದೇವದುರ್ಗ: ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಳೆದ ಮೂರು ವರ್ಷದ ಅವಧಿಯಲ್ಲಿ ಸುಮಾರು 750ಕೋಟಿ ರೂಪಾಯಿಯನ್ನು ಪಡೆಯಲಾಗಿದ್ದು, ಇದು ಹೈದರಾಬಾದ್ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಅನುದಾನ ಪಡೆದ ಕ್ಷೇತ್ರ ಎಂದರೂ ತಪ್ಪಾಗದು ಎಂದು ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.

ಸೆ. 17ರಂದು ಪಟ್ಟಣಕ್ಕೆ ಮುಖ್ಯಮಂತ್ರಿ ಡಿ.ಎಸ್. ಸದಾನಂದಗೌಡ ಅವರ ಆಗಮನದ ಪೂರ್ವಭಾವಿ ತಯಾರಿಗಾಗಿ ಭಾನುವಾರ ಪಟ್ಟಣದಲ್ಲಿ ಕರೆಯಲಾಗಿದ್ದ ಪಕ್ಷದ ಮುಖಂಡರ ಸಭೆಯ ನಂತರ ಜಿಲ್ಲಾ ಅಧ್ಯಕ್ಷ ಅಮರೇಶ ಹೊಸಮನಿ ಮತ್ತು ಶಾಸಕ ಕೆ. ಶಿವನಗೌಡ ನಾಯಕ ಅವರು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದರು.

ಮೂರು ವರ್ಷದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಕಾಮಗಾರಿಗಾಗಿ ಮಂಜೂರಾಗಿದ್ದ ಸುಮಾರು 108ಕೋಟಿ ರೂಪಾಯಿ ಕಾಮಗಾರಿಗಳು ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ 35ಕೋಟಿ ರೂಪಾಯಿ ಕಾಮಗಾರಿ ಸೇರಿ ಒಟ್ಟು 150ಕೊಟಿ ರೂಪಾಯಿ ಕಾಮಗಾರಿಗಳು ಮುಗಿಯುವ ಹಂತದಲ್ಲಿ ಇವೆ ಎಂದರು.

200 ಕೋಟಿ ರೂಪಾಯಿ ತಿಂಥಿಣಿ ಬ್ರಿಜ್‌ದಿಂದ ಕಲ್ಮಲ ರಾಜ್ಯ ಹೆದ್ದಾರಿ ಕಾಮಗಾರಿಗಾಗಿ ಹಾಗೂ ಅಮರಾಪೂರದಿಂದ ಚಿಂಚರಕಿ ರಸ್ತೆ ನಿರ್ಮಾಣ, ಗೂಗಲ್‌ದಿಂದ ಸಿರವಾರ ರಸ್ತೆ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳಿಗಾಗಿ 120ಕೊಟಿ ರೂಪಾಯಿ ಸೇರಿ ಒಟ್ಟು 500ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಅವಶ್ಯಕ ಇರುವ ಕಾಮಗಾರಿಗಾಗಿ 250ಕೋಟಿ ರೂಪಾಯಿ ಮಂಜೂರಾತಿ ಹಂತದಲ್ಲಿ ಇದೆ ಎಂದು ಹೇಳಿದರು.

ಅಡಿಗಲ್ಲು, ಉದ್ಘಾಟನೆ: ಸೆ. 17ರಂದು ಮುಖ್ಯಮಂತ್ರಿ ಡಿ.ಎಸ್. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸೇರಿದಂತೆ 11ಜನ ಸಚಿವರು ಗುಲ್ಬರ್ಗದಿಂದ ಪಟ್ಟಣಕ್ಕೆ ಹೆಲಿಕಾಪ್ಟಕ್ ಮೂಲಕ ಸೆಂಜೆ 3ಗಂಟೆಗೆ ಆಗಮಿಸಿ ನಂತರ ಕ್ರೀಡಾಂಗಣ ಉದ್ಘಾಟನೆ, ಜಿಲ್ಲೆ ಮತ್ತು ತಾಲ್ಲೂಕು ಸಮಸ್ಯೆಗಳ ಬಗ್ಗೆ ಮುಖಂಡರೊಂದಿಗೆ ಚರ್ಚಿಸಿದ ನಂತರ 12309 ಆಶ್ರಯ ಮನೆಗಳ ಉದ್ಘಾಟನೆ, ಪಟ್ಟಣ ವೀಕ್ಷಣೆ, ಗ್ರಂಥಾಲಯ ಮತ್ತು ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ, ಬಸ್ ನಿಲ್ದಾಣ ಉದ್ಘಾಟನೆ, ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ತಿಂಥಿಣಿ ಬ್ರಿಜ್‌ದಿಂದ ಕಲ್ಮಲ ರಾಜ್ಯ ಹೆದ್ದಾರಿಗೆ ಅಡಿಗಲ್ಲು ನಂತರ ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ಏರ್ಪಡಿಸಲಾಗುವ ಇತರ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪಕ್ಷದ ಮುಖಂಡರಾದ ಶಾಮರಾವ್ ಕುಲ್ಕರ್ಣಿ, ದೇವಿಂದ್ರಪ್ಪಗೌಡ ಹಂಚಿನಾಳ, ಸಿ.ಎಸ್.ಪಾಟೀಲ, ಉಮೇಶ ಸಜ್ಜನ, ರಮಾನಂದ ಯಾದವ್, ಶರಣಪ್ಪಗೌಡ ಬೂದಿನಾಳ, ತಿಮ್ಮರಡ್ಡಿ, ಜಿಪಂ ಸದಸ್ಯ ಶರಣಬಸವ ನಾಯಕ, ಸಂಗಯ್ಯಸ್ವಾಮಿ ಗಬ್ಬೂರು, ಅಲೀಮಪಾಶಾ, ಜಲಾಲುದ್ದೀನ್ ನಾಗುಂಡಿ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.