ADVERTISEMENT

ಧಾರಾಕಾರ ಮಳೆ: ಶಾಲೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:11 IST
Last Updated 1 ಅಕ್ಟೋಬರ್ 2017, 10:11 IST
ಜಾಲಹಳ್ಳಿ ಪಟ್ಟಣದಲ್ಲಿ ಗುರುವಾರ ಸುರಿದ ಮಳೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವರಣದಲ್ಲಿ ನೀರು ನಿಂತಿರುವುದು
ಜಾಲಹಳ್ಳಿ ಪಟ್ಟಣದಲ್ಲಿ ಗುರುವಾರ ಸುರಿದ ಮಳೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವರಣದಲ್ಲಿ ನೀರು ನಿಂತಿರುವುದು   

ಜಾಲಹಳ್ಳಿ: ಪಟ್ಟಣದ ಗುರುವಾರ ಸುರಿದ ಮಳೆಯಿಂದಾಗಿ ಹೊರವಲಯದ ಲಿಂಗದಹಳ್ಳಿ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ನೀರು ನುಗ್ಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಶಾಲೆ ಬಳಿ ಇರುವ ಎರಡು ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಮಣ್ಣಿನ ಏರಿ ಒಡೆದು ಶಾಲೆಯ ಅವರಣ ಮತ್ತು ಕೋಣೆಗಳಿಗೆ ನೀರು ನುಗ್ಗಿತು. ಆಗ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸ್ನೇಹಿತರ ಕೊಣೆಗಳಲ್ಲಿ ಮಲಗಿದೆವು ಎಂದು ವಿದ್ಯಾರ್ಥಿ ರಮೇಶ ತಿಳಿಸಿದರು.

ವಸತಿ ಶಾಲೆಯಲ್ಲಿ 240 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 12 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಶಾಲೆಗೆ 12 ಎಕರೆ ಕೃಷಿ ಭೂಮಿಯನ್ನು ಸ್ಥಳೀಯ ನಿವಾಸಿಗಳು ದಾನವಾಗಿ ನೀಡಿದ್ದಾರೆ.

ADVERTISEMENT

ಭೂಮಿ ಮಟ್ಟದಿಂದ ಒಂದು ಅಡಿ ಕೂಡ ಮೇಲೆ ಇಲ್ಲದೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಶಾಲೆಯ ಸುತ್ತಲೂ ಯಾವುದೇ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಹೀಗಾಗಿ ಮಳೆ ಬಂದರೆ ಹಾವು, ಚೇಳು ಸೇರಿದಂತೆ ವಿಷ ಜಂತುಗಳು ಕೊಠಡಿ ಒಳಗೆ ಬರುತ್ತವೆ ಎಂದು ವಿದ್ಯಾರ್ಥಿ ಗಣೇಶ ಹೇಳಿದರು.

‘ಇಲ್ಲಿನ ಸಮಸ್ಯೆ ಬಗ್ಗೆ ಈ ಹಿಂದೆಯೇ ಶಾಸಕರು ಸೇರಿದಂತೆ, ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಾಹಿತಿ ಇದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಎಸ್‌ಎಫ್‌ಐ ಸಂಘದ ಅಧ್ಯಕ್ಷ ಅಮರೇಶ ನಾಯಕ ದೂರಿದರು.

‘ಸ್ಥಳೀಯ ಗ್ರಾ.ಪಂ ವತಿಯಿಂದ ಉದ್ಯೋಗ ಖಾತರಿ ಯೋಜನೆ ಅಡಿ ಪ್ರತಿ ವರ್ಷ ಈ ಶಾಲೆಯ ಆವರಣದಲ್ಲಿ ಮಣ್ಣು (ಮರಂ) ಹಾಕಲು ₹5 ಲಕ್ಷ ಮೀಸಲ್ಲಿಟ್ಟು ಬೇಕಾ ಬಿಟ್ಟಿಯಾಗಿ ಕೆಲಸ ಮಾಡಿ ಹಣ ಲೂಟಿ ಮಾಡಲಾಗಿದೆ. ತಕ್ಷಣ ಶಾಲೆ ಸುತ್ತ ತಡೆಗೋಡೆ ನಿರ್ಮಾಣ ಹಾಗೂ ಎರಡು ಬದಿಯಲ್ಲಿ ಹಳ್ಳದ ಹೂಳು ಸ್ವಚ್ಛತೆ ಮಾಡಿ ಕಿರು ಸೇತುವೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು’ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಣ್ಣ ಕೋಲ್ಕಾರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.