ADVERTISEMENT

ನಿರಾಶ್ರಿತ ಹಿಂದೂಗಳಿಗೆ ಪೌರತ್ವ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:37 IST
Last Updated 7 ಜನವರಿ 2014, 6:37 IST

ರಾಯಚೂರು: ಭಾರತಕ್ಕೆ ಬಂದಿರುವ ಎಲ್ಲ ನಿರಾಶ್ರಿತ ಹಿಂದೂಗಳಿಗೆ ಪೌರತ್ವ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಹಿಂದೂ ಯುವತಿಯರ ಮೇಲೆ ಬಲಾತ್ಕಾರ, ದೇವಸ್ಥಾನಗಳ ನಾಶ ಮಾಡಲಾಗುತ್ತಿದೆ. ಅಲ್ಲಿನ ಹಿಂದೂಗಳಿಗೆ ಯಾವುದೇ ಸಾಮಾಜಿಕ, ರಾಜಕೀಯ ಅಧಿಕಾರವಿಲ್ಲ. ಅವರ ಜೀವನ ಅತ್ಯಂತ ಅಸುರಕ್ಷಿತವಾಗಿದೆ ಎಂದು ಸಮಸ್ಯೆ ವಿವರಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಭಾರತ ದೇಶಕ್ಕೆ ಬಂದಂತಹ ಎಲ್ಲ ಶರಣಾರ್ಥಿ ಹಿಂದೂಗ­ಳಿಗೆ ದೇಶದ ಪೌರತ್ವ ನೀಡಬೇಕು, ನಿರಾಶ್ರಿತ ಹಿಂದೂಗಳ ಮಕ್ಕಳಿಗೆ ಶೈಕ್ಷಣ ಸೌಕರ್ಯ ಕಲ್ಪಿಸಬೇಕು,  ಉದ್ಯೋಗದಲ್ಲಿ ಮೀಸಲು, ಉಚಿತ ಮನೆ ದೊರಕಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ತಕ್ಷಣ ನಿರಾಶ್ರಿತರ ಬಗ್ಗೆ ಎಲ್ಲ ಅಂತರ­ರಾಷ್ಟ್ರೀಯ ಒಪ್ಪಂದಗಳಲ್ಲಿ ಭಾಗವಹಿಸಬೇಕು ಹಾಗೂ ಹಿಂದೂ­ಗಳಿಗೆ ನ್ಯಾಯ ದೊರಕಿಸಿಕೊಡಬೇಕು, ಯಾವುದೇ ಶರಣಾರ್ಥಿ ಹಿಂದೂಗಳಿಗೆ ವೀಸಾ ಮುಗಿದ ನಂತರ ಅಥವಾ ಇತರ ಯಾವುದೇ ಕಾರಣಗಳಿಂದ ಒತ್ತಾಯಪೂರ್ವಕವಾಗಿ ಪಾಕಿ­ಸ್ತಾನಕ್ಕೆ ಕಳುಹಿಸಬಾರದು ಎಂದು ಒತ್ತಾಯಿಸಿದರು.

ದೇಶ ಮತ್ತು ರಾಷ್ಟ್ರಧ್ವಜಕ್ಕಾಗುವ ಅಪಮಾನ ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ರಾಷ್ಟ್ರ ಧ್ವಜಕ್ಕೆ ಅಪಮಾನವಾಗದಂತೆ ಸರರ್ಕಾರ ತೆಗೆದುಕೊಂಡ ನಿರ್ಣಯ ಕಾರ್ಯರೂಪಕ್ಕೆ ತರಬೇಕು, ಪ್ಲಾಸ್ಟಿಕ್ ರಾಷ್ಟ್ರಧ್ವಜ, ಬಿಲ್ಲೆ ಹಾಗೂ ಇತರ ವಸ್ತುಗಳನ್ನು ಉತ್ಪಾದನೆ ಮಾಡುವ ಉತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ಲಾಸ್ಟಿಕ್‌ ಧ್ವಜ ತಯಾರಕರ ಮೇಲೆ ಪೊಲೀಸ್‌ ಸಹಾಯದಿಂದ ದಾಳಿ ನಡೆಸಿ ವಸ್ತುಗಳ ಜಪ್ತಿ ಮಾಡಬೇಕು, ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಚಾಲಕರಾದ ಕೃಷ್ಣವೇಣಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳಾದ ವಾಸಂತಿ, ಸುವರ್ಣ, ಸುನಂದ, ಬಿ.ವಿಜಯಲಕ್ಷ್ಮೀ, ಸರಳಾ, ಜಯಾ ಪಾಟೀಲ್‌ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.