ADVERTISEMENT

ನೈಜ ನಾಜೂಕಿನ ಸಮತೋಲನ... ಕಳ್ಳ ಸುಳ್ಳುತನ ತುಂಬಿದ ಬಜೆಟ್...

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 6:40 IST
Last Updated 4 ಏಪ್ರಿಲ್ 2012, 6:40 IST

ರಾಯಚೂರು: ರಾಯಚೂರು ನಗರಸಭೆಯ 2012-13ನೇ ಸಾಲಿನ ಬಜೆಟ್ ನೈಜ ನಾಜೂಕಿನ ಸಮತೋಲನ ಬಜೆಟ್ ಎಂದು ಆಡಳಿತ ಪಕ್ಷವಾದ ಕಾಂಗ್ರೆಸ್ ಸದಸ್ಯರು ಬಜೆಟ್ ಅಂಶಗಳನ್ನು ಬಣ್ಣಿಸಿದರೆ ವಿರೋಧ ಪಕ್ಷವಾದ ಜೆಡಿಎಸ್ ಸದಸ್ಯರು ಹಿಂದಿನ ವರ್ಷಗಳ ಬಜೆಟ್ ಪ್ರತಿಯ ಜೆರಾಕ್ಸ್! ನಗರದ ಜನತೆಯ ಅಶಯಕ್ಕೆ ತದ್ವಿರುದ್ಧದ ಬಜೆಟ್ ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಸಾರ್ವಜನಿಕ ಉದ್ಯಾನವನದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ಅವರು 2012-13ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಬಳಿಕ ಬಜೆಟ್ ಬಗ್ಗೆ ಚರ್ಚೆ ನಡೆಯಿತು.

ವಿರೋಧ ಪಕ್ಷವಾದ ಜೆಡಿಎಸ್‌ನ ನಗರಸಭೆ ಸದಸ್ಯ ತಿಮ್ಮಪ್ಪ ಪಿರಂಗಿ ಮಾತನಾಡಿ, ಬಜೆಟ್‌ನಲ್ಲಿ ವಿಶೇಷತೆ ಇಲ್ಲ. ಕಳ್ಳ-ಸುಳ್ಳರು ರೂಪಿಸಿದ ಬಜೆಟ್‌ನಂತಿದೆ. ನಗರದ ಜನತೆ ನಿರೀಕ್ಷೆಯ ಹೊಸ ಅಂಶಗಳಿಲ್ಲ. ಹೋದ ವರ್ಷದ ಬಜೆಟ್ ಕೈಪಿಡಿ 25 ಪುಟ ಇತ್ತು. ಈ ವರ್ಷ 21ಪುಟಕ್ಕೆ ತಗ್ಗಿದೆ. ಹಾಗೆಯೇ ಅನುದಾನವೂ ಕಡಿಮೆ ಆಗಿದೆ.
 
ಅದೇ ರಸ್ತೆ, ಚರಂಡಿ, ನೀರು ಅಂಶಗಳೇ ಪ್ರಸ್ತಾಪ. ವಿಶೇಷ ಮತ್ತು ವಿನೂತನ ಅಂಶಗಳಿಲ್ಲ. 33 ಕೊಳಚೆ ಪ್ರದೇಶ ಸುಧಾರಣೆ ಬಗ್ಗೆ ಪ್ರಸ್ತಾಪವಿಲ್ಲ. ಹಿಂದಿನ ವರ್ಷ ನಿಗದಿಪಡಿಸಿದ ಅನುದಾನ ಸದ್ಬಳಕೆ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ಷೇಪಿಸಿದರು.

ಸತತ ಎರಡು ವರ್ಷಗಳಿಂದ ನಗರಸಭೆ 22.75 ಹಾಗೂ 7.25 ಯೋಜನೆಯಡಿ 87 ಲಕ್ಷ ಅನುದಾನ ಬಳಕೆ ಮಾಡಿಲ್ಲ. ಫಲಾನುಭವಿಗಳನ್ನು ಗುರುತಿಸುವ ಗೋಜಿಗೆ ಹೋಗಿಲ್ಲ. ಇದಕ್ಕೆ ಜವಾಬ್ದಾರಿ ಯಾರು? ಸರ್ಕಾರದ ಆದೇಶ ಗಾಳಿಗೆ ತೂರಿ ಜವಾಬ್ದಾರಿ ಮರೆತು ಬಜೆಟ್‌ನಲ್ಲಿ ಜನಪರ ಕಾರ್ಯ ಘೋಷಣೆ ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ಈ ಬಜೆಟ್ ಸಮತೋಲನ ಬಜೆಟ್. ಯಾರ ಶಹಬ್ಬಾಸ್‌ಗಿರಿಯ ಪಡೆಯಲು ಮಂಡಿಸಿದ ಬಜೆಟ್ ಅಲ್ಲ. ಆ ಅಪೇಕ್ಷೆಯೂ ಇಲ್ಲ. ಕಳೆದ ಬಾರಿ ಪ್ರಸ್ತಾಪಿಸಿದ ಬಜೆಟ್ ಅನೇಕ ಮಹತ್ವ ಕಾರ್ಯ ಅನುಷ್ಠಾನಕ್ಕೆ ತಂದ ತೃಪ್ತಿ ಇದೆ. 22.75 ಹಾಗೂ 7.25 ಯೋಜನೆಯಡಿ ಅನುದಾನ ಸಮರ್ಪಕ ಮತ್ತು ಸಕಾಲದಲ್ಲಿ ಬಳಕೆ ಮಾಡುವಲ್ಲಿ ನಗರಸಭೆ ಎಡವಿದೆ ಎಂಬುದು ಒಪ್ಪಿಕೊಳ್ಳಬೇಕು.

ಕಚ್ಚಾ ಪಕ್ಕಾ ಮನೆ ಕಲ್ಪಿಸುವಲ್ಲಿ ಸರ್ಕಾರ 30 ಸಾವಿರ ಅನುದಾನ ಕೊಡುತ್ತದೆ. ಫಲಾನುಭವಿ ಗುರುತಿಸುವಲ್ಲಿ ನಾಲ್ಕು ಅಂಶ ಪ್ರಸ್ತಾಪಿಸಿ ಸರ್ಕಾರವೂ ನಮ್ಮನ್ನೂ ಚುಚ್ಚಿದೆ. ಈ ಪ್ರಮುಖ ಯೋಜನೆಯ ಅನುಷ್ಠಾನಕ್ಕೆ,  ಯೋಜನೆಯ ಮಾರ್ಗದರ್ಶಿ ಸೂತ್ರದ ಪ್ರಕಾರ ಅರ್ಹ ಫಲಾನುಭವಿ ಗುರುತಿಸುವಿಕೆಗೆ ಕಟ್ಟುನಿಟ್ಟಿನ ಒಬ್ಬ ಅಧಿಕಾರಿ ನೇಮಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಈ ಹಣ ಬಳಕೆ ಅಸಾಧ್ಯ ಎಂದು ವಿವರಣೆ ನೀಡಿದರು.

ಜೆಡಿಎಸ್ ಪಕ್ಷದ ನಗರಸಭೆ ಸದಸ್ಯ ತಿಮ್ಮಾರೆಡ್ಡಿ ಮಾತನಾಡಿ, ಹಿಂದಿನ ಬಜೆಟ್‌ನ ವಿಷಯಗಳೇ ಪ್ರಸ್ತಾಪ. ಡಿಸೆಂಬರ್‌ನಲ್ಲಿ ವಿರೋಧ ಪಕ್ಷದ ಸದಸ್ಯರೊಂದಿಗೆ ಚರ್ಚಿಸಿ ಬಜೆಟ್ ಬಗ್ಗೆ ಅಭಿಪ್ರಾಯ ಪಡೆಯಬೇಕು, ಅದನ್ನೂ ಮಾಡಿಲ್ಲ. ಈಗ ಮಂಡಿಸಿರುವ ಬಜೆಟ್‌ನಲ್ಲಿ ಆದಾಯ ಮತ್ತು ವೆಚ್ಚದ ಬಗ್ಗೆ ಸಮರ್ಪಕ ವಿವರಣೆ ಇಲ್ಲ.

ಆದಾಯಕ್ಕಿಂತ ಖರ್ಚೆ ಹೆಚ್ಚು. ಸೆಟ್ಲಿಂಗ್ ಟ್ಯಾಂಕ್ ನಿರ್ಮಾಣ, ಡೋನೇಷನ್ ಪಡೆಯುವ ಟ್ರಸ್ಟ್‌ಗಳಿಂದ ತೆರಿಗೆ ಸಂಗ್ರಹಣೆ, ರಾಂಪುರ ಜಲಾಶಯ ಪಕ್ಕ ಶುದ್ಧೀಕರಣ ಘಟಕ ದುರಸ್ತಿ, ಕೋಟ್ಯಾಂತರ ಹಣ ವೆಚ್ಚ ಮಾಡಿದರೂ ನಗರ ಅಸ್ವಚ್ಛತೆಯಿಂದ ಕೂಡಿರುವುದು ಇಂಥ ಅನೇಕ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಪಕ್ಷದ ನಗರಸಭೆ ಹಿರಿಯ ಸದಸ್ಯ ಶಾಂತಪ್ಪ ಮಾತನಾಡಿ, ಈ ಬಜೆಟ್ ಕಳ್ಳರು-ಸುಳ್ಳರು ರೂಪಿಸಿದ ಬಜೆಟ್ ಎಂಬ ವಿರೋಧ ಪಕ್ಷದ ಸದಸ್ಯ ತಿಮ್ಮಪ್ಪ ಅವರ ಪದ ಬಳಕೆ ಸರಿಯಲ್ಲ. ಇದು ಮುಂದಾಲೋಚನೆ ಬಜೆಟ್. ನಗರ ನೀರಿನ ಸಮಸ್ಯೆ ತೀವ್ರತೆ ಹಿನ್ನೆಲೆಯಲ್ಲಿ ಕೃಷ್ಣಾ ಮೂರನೇ ಹಂತದ ಯೋಜನೆ ಅವಶ್ಯ. ಅಗ್ನಿ ಆಕಸ್ಮಿಕ, ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ನಗರಸಭೆಯಿಂದ ಈ ಬಜೆಟ್‌ನಲ್ಲಿ ಹೆಚ್ಚಿನ ಪರಿಹಾರ ಮೊತ್ತದ ನಿಗದಿ ಅವಶ್ಯ ಎಂದು ಗಮನ ಸೆಳೆದರು.

ವಿರೋಧ ಪಕ್ಷದ ನಾಯಕ ಯುಸೂಫ್‌ಖಾನ್ ಮಾತನಾಡಿ, ಸಿಯಾತಲಾಬ್ ಹತ್ತಿರ ಸುಮಾರು ಎರಡು ಎಕರೆಯಷ್ಟು ಉದ್ಯಾವನ ಜಾಗೆ ಒತ್ತುವರಿ ಪ್ರಯತ್ನ ನಡೆದಿದೆ. ಅದನ್ನು ತಡೆಯಬೇಕು. ಮಳೆ ನೀರು ಬಂದಾಗ ಸರಾಗವಾಗಿ ಹರಿದು ಹೋಗಲು ರಾಜ ಕಾಲುವೆ ಸಮರ್ಪಕ ದುರಸ್ತಿಗೆ ಹಣ ದೊರಕಿಸಲು ಹಿಂದಿನ ಬಜೆಟ್‌ನಲ್ಲೂ ಕೋರಲಾಗಿತ್ತು. ಕಾಮಗಾರಿ ಆಗಿಲ್ಲ. ಈ ಬಜೆಟ್‌ನಲ್ಲಿ ದೊರಕಿಸಬೇಕು ಎಂದರು.

ಹಿರಿಯ ಸದಸ್ಯ ಎ ಮಾರೆಪ್ಪ ಮಾತನಾಡಿ, ಶವ ಸಂಸ್ಕಾರಕ್ಕೆ ಸ್ಮಶಾನ ದೂರವಾಗಿದೆ. ಒಂದು ಭಾಗದವರಿಗೆ ಮತ್ತೊಂದು ಭಾಗಕ್ಕೆ ತೆರಳುವುದು ಕಷ್ಟ ಆಗುತ್ತಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಬೇರೆ ಕಡೆ ಜಾಗೆ ಖರೀದಿ ಬಗ್ಗೆ ವಿಚಾರ ಮಾಡಬೇಕು. ಅಲ್ಲದೇ ಶವ ಸಂಸ್ಕಾರಕ್ಕೆ ಒಯ್ಯಲು ಒಂದೆರಡು ವಾಹನ ಖರೀದಿ ಮಾಡಬೇಕು. ನಗರಸಭೆ ಮಾಡಬೇಕಾದ ಮುಖ್ಯ ಜವಾಬ್ದಾರಿ ಕೆಲಸ. ಮೂತ್ರಾಲಯ, ಉದ್ಯಾನ ಅಭಿವೃದ್ಧಿಗೆ ಒತ್ತು ಕೊಡಬೇಕು. ಕೊಳಚೆ ನೀರು ಚರಂಡಿ ನಿರ್ಮಾಣಕ್ಕೆ ಎರಡುವರೆ ಕೋಟಿ ದೊರಕಿಸಬೇಕು ಎಂದು ಹೇಳಿದರು.

ನಗರಸಭೆ ವ್ಯಾಪ್ತಿ ಹಳ್ಳಿ ಪ್ರದೇಶಕ್ಕೆ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಬೇಕು, ರಸ್ತೆ ಅಭಿವೃದ್ದಿಗೆ ಹಣ ದೊರಕಿಸಬೇಕು ಎಂದು ಸದಸ್ಯ ಶಂಶಾಲಂ ಪ್ರಸ್ತಾಪಿಸಿದರೆ, ಹಿರಿಯ ಸದಸ್ಯ ರಹೀಮ್ ಅವರು, ಹಿಂದಿನ ಬಜೆಟ್‌ನಲ್ಲೇ ಶಾದಿ ಮಹಲ್ ನಿರ್ಮಾಣಕ್ಕೆ ಕೋರಿದ್ದೆ. ಈ ಬಜೆಟ್‌ನಲ್ಲೂ ಆಗಿಲ್ಲ. ಈಗಲಾದರೂ ಪರಿಶೀಲಿಸಬೇಕು ಎಂದು ಗಮನ ಸೆಳೆದರು.

ನಗರದ 28 ಮತ್ತು 29ನೇ ವಾರ್ಡ್‌ನಲ್ಲಿ ಬಡ ಜನ, ಕೂಲಿಕಾರರೇ ವಾಸಿಸುತ್ತಿದ್ದು, ನೀರಿನ ಸಮಸ್ಯೆ ಗಂಭೀರ. ಕನಿಷ್ಠ 10 ಕೊಳವೆ ಬಾವಿ ತೋಡಬೇಕು. ಅದಾಗದಿದ್ದರೆ ನೀರಿನ ಟ್ಯಾಂಕ್‌ನಿಂದ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ಜನಾರ್ದನರೆಡ್ಡಿ ಹೇಳಿದರು.

ಸದಸ್ಯ ಶಶಿರಾಜ್ ಮಾತನಾಡಿ, ಶೆಟ್ಟಿ ಬಾವಿ, ಸಿಟಿ ಟಾಕೀಸ್,  ಪಟೇಲ್ ರಸ್ತೆ ಅಗಲೀಕರಣ ತುರ್ತು ಕೈಗೊಂಡು ಪರಿಹಾರ ಕೊಡಬೇಕು, ತೀನ್ ಕಂದೀಲ್ ಸರ್ಕಲ್‌ನ ಕಲ್ಲಾನೆ ಸ್ಮಾರಕ ಅಭಿವೃದ್ಧಿಗೆ ಕನಿಷ್ಠ 40 ಲಕ್ಷ ದೊರಕಿಸಬೇಕು ಎಂದು ಕೋರಿದರು.

ಆಯುಕ್ತರ ಹೇಳಿಕೆ: ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆ ಹೆಚ್ಚಾಗಿದೆ. ಇರುವ ಸಿಬ್ಬಂದಿಯಲ್ಲಿಯೇ ನೆನೆಗುದಿಗೆ ಬಿದ್ದ ಯೋಜನೆಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಬಾಕಿ  ವೇತನ, ಮೂಲಭೂತ ಸೌಕರ್ಯ, 22.75 ಹಾಗೂ 7.25 ಯೋಜನೆಗೆ ಫಲಾನುಭವಿ ಪಟ್ಟಿ ಪಡೆಯುವುದು ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಆಯುಕ್ತ ತಿಮ್ಮಪ್ಪ ಸಭೆಯ ಗಮನಕ್ಕೆ ತಂದರು.

ನೀರು ಶುದ್ದೀಕರಣ ಘಟಕ ದುರಸ್ತಿಗೆ ಆದ್ಯತೆ, ಜಿಲ್ಲಾಡಳಿತದಿಂದಲೂ ಅನುದಾನ ದೊರಕಿಸುವ ಭರವಸೆ ಜಿಲ್ಲಾಧಿಕಾರಿಗಳಿಂದ ದೊರಕಿದೆ ಎಂದು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.