ADVERTISEMENT

ಪ್ರಾಮಾಣಿಕತೆ ಮೆರೆದ ಬಸ್ ಚಾಲಕ-ನಿರ್ವಾಹಕ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:23 IST
Last Updated 3 ಜೂನ್ 2013, 10:23 IST

ರಾಯಚೂರು: ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಆಭರಣ ಮತ್ತು ನಗದು  ಸೇರಿದಂತೆ ಒಟ್ಟು 1 ಲಕ್ಷ ಮೌಲ್ಯದ ಸೊತ್ತನ್ನು ಪ್ರಯಾಣಿಕರಿಗೆ ಹಿಂದಿರುಗಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ  ಸಂಸ್ಥೆಯ ಮಸ್ಕಿ ಘಟಕದ ನಿರ್ವಾಹಕ ಶರಣಬಸವ ಮತ್ತು ಚಾಲಕ ಸಂಗಮೇಶ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಘಟನೆ ವಿವರ: ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಗ್ರಾಮದ ಬಸಣ್ಣ ಎಂಬವರು ಹೈದರಾಬಾದ್ ನಿಂದ ಹಟ್ಟಿಗೆ ಬರಬೇಕಾಗಿತ್ತು. ಅವರು ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಮಸ್ಕಿ ಘಟಕ್ಕೆ ಸೇರಿದ ಬಸ್‌ಗೆ ಹತ್ತಿದ್ದರು.  ಸ್ವಲ್ಪ ಸಮಯದ ನಂತರ ಟಿಕೆಟ್ ಪಡೆಯದೇ ಶೌಚಾಲಯಕ್ಕೆ ಹೋಗಿದ್ದರು. ಆಗ ಬಸ್ ಹೊರಟು ಬಂದಿತ್ತು. ಮಸ್ಕಿ ಘಟಕಕ್ಕೆ ಬಂದ ಮೇಲೆ  ಚಾಲಕ ಸಂಗಮೇಶ ಹಾಗೂ ನಿರ್ವಾಹಕ ಶರಣಬಸವ ಬಸ್ ಅನ್ನು ಪರಿಶೀಲಿಸಿದರು.

ಆಗ ಬಸಣ್ಣ ಅವರ ಚೀಲ ಇರುವುದು ಕಂಡು ಬಂತು. ಅದನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು. ಚೀಲದಲ್ಲಿ ಎರಡೂವರೆ ತೊಲ ಚಿನ್ನದ ನೆಕ್ಲೆಸ್, ಅರ್ಧ ತೊಲ ಚಿನ್ನದ ಉಂಗುರ, ಹನ್ನೊಂದು ತೊಲೆಯ ಬೆಳ್ಳಿ ಚೈನ್, ನಗದು 500ರೂಪಾಯಿ ಹಾಗೂ ಒಂದು ಮೊಬೈಲ್ ಸೇರಿದಂತೆ ಒಟ್ಟು 1 ಲಕ್ಷ ಮೊತ್ತದ ಆಭರಣಗಳಿದ್ದವು ಎಂದು ಮಸ್ಕಿ ಘಟಕದ ಸಂಚಾರಿ ನಿರೀಕ್ಷ  ಶಂಕರ ನಾಯಕ  ತಿಳಿಸಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಸ್ಕಿ ಘಟಕದ ಬಸ್ ಚಾಲಕ ಸಂಗಮೇಶ, ನಿರ್ವಾಹಕ ಶರಣಬಸವ ಅವರಿಗೆ ಪ್ರಾಮಾಣಿಕತೆಗೆ ತಲಾ 300 ರೂಪಾಯಿಗಳನ್ನು ಬಹುಮಾನವಾಗಿ ನೀಡಲು ಸಂಸ್ಥೆ ಘೋಷಣೆ ಮಾಡಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಆರ್. ವೆಂಕಟೇಶ್ವರರೆಡ್ಡಿ  `ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.