ADVERTISEMENT

ಫೆ. 20ರಿಂದ ವಿಮಾ ತಿದ್ದುಪಡಿ ವಿರೋಧಿಸಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:01 IST
Last Updated 7 ಡಿಸೆಂಬರ್ 2012, 6:01 IST

ರಾಯಚೂರು: ಕೇಂದ್ರದ ವಿಮಾ ತಿದ್ದುಪಡಿ 2008ವನ್ನು ವಿರೋಧಿಸಿ ಫೆಬ್ರುವರಿ 20 ಮತ್ತು 21ರಂದು ಎರಡು ದಿನಗಳು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಮುಷ್ಕರವನ್ನು ನಡೆಸಲಾಗುತ್ತಿದೆ ಎಂದು ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಇದೇ ಸಂಸತ್ ಅಧಿವೇಶನದಲ್ಲಿ ವಿಮಾ ತಿದ್ದುಪಡಿ 2008ರ ಮಂಡಿಸಿ ತಿದ್ದುಪಡಿ ಜಾರಿಗೆ ತರಲು ಮುಂದಾಗಿದೆ. ವಿಮಾ ಕ್ಷೇತ್ರದಲ್ಲಿ ಸದ್ಯ ಇರುವ ಶೇ 26ರಿಂದ 49ಕ್ಕೆ ಹೆಚ್ಚಿಸಲು ಹುನ್ನಾರ ನಡೆಸಿದೆ ಎಂದು ಆಪಾದಿಸಿದರು.

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಹೊರಟಿರುವ ವಿಮಾ ತಿದ್ದುಪಡಿ 2008ನ್ನು ಪ್ರತಿಯೊಬ್ಬ ಭಾರತೀಯರು ವಿರೋಧಿಸಬೇಕು. ಸಾಮಾನ್ಯ ವಿಮಾ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಪ್ರಕ್ರಿಯೆ ಗೊಳಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ 23 ಜೀವ ವಿಮಾ ಕಂಪೆನಿಗಳು ಹಾಗೂ 18 ಖಾಸಗಿ ಕಂಪೆನಿಗಳು ಕಳೆದ 10 ವರ್ಷಗಳಿಂದಲೂ ಮೂಲ ಉದ್ದೇಶಗಳನ್ನು ಬದಿಗೊತ್ತಿ ವ್ಯಾಪಾರ ಮಾಡುತ್ತಿವೆ. ಉದಾರೀಕರಣ ನೀತಿಗಳಿಂದ ದೇಶದ ಅಭಿವೃದ್ಧಿಗೆ ಮೂಲ ಸೌಲಭ್ಯಗಳಿಗೆ ಜಾಗತಿಕ ಬಂಡವಾಳ ಹರಿದು ಬರುತ್ತಿದೆ ಎಂದು ನಂಬಲಾಗಿತ್ತು. ಆದರೆ ಅದು ಹುಸಿಯಾಗಿದೆ ಎಂದು ವಿವರಿಸಿದರು.

ವಿಮಾ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಕೇವಲ 6,700 ಮಾತ್ರ ಈ ಬಂಡವಾಳದಿಂದ ವಿಮಾ ಕ್ಷೇತ್ರವು ಸುಧಾರಿಸುತ್ತದೆ ಎಂಬ ನಂಬಿಕೆಯು ಹುಸಿಯಾಗಿದೆ. ಎಲ್‌ಐಸಿ ಮತ್ತು ಜಿಐಸಿಗಳು ತಮ್ಮ ಸಾಮರ್ಥ್ಯ ಹಾಗೂ ದಕ್ಷ ಸೇವೆಯಿಂದಾಗಿ ಬೃಹತ್ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮಿದ್ದು, ಅವುಗಳನ್ನು ಬಲಪಡಿಸಬೇಕಾದ ಸರ್ಕಾರ ದುರ್ಬಲಗೊಳಿಸುವ ಹುನ್ನಾರಕ್ಕೆ ಕೈಹಾಕಿದೆ ಎಂದು ಟೀಕಿಸಿದರು.

ವಿಶ್ವ ಆರ್ಥಿಕ ಒಕ್ಕೂಟ 2012ರ ಆರ್ಥಿಕ ಅಭಿವೃದ್ಧಿ ವರದಿಯಲ್ಲಿ ಜಗತ್ತಿನಲ್ಲಿಯೇ ಭಾರತ ಜೀವ ವಿಮಾ ಕ್ಷೇತ್ರ ಮೊದಲನೇ ಸ್ಥಾನದಲ್ಲಿದೆ. ಜಿಐಸಿ ಮೂರನೇ ಸ್ಥಾನದಲ್ಲಿದೆ. ಅತ್ಯಂತ ಕಡಿಮೆ ವಾರ್ಷಿಕ ವರಮಾನ ಹೊಂದಿದ ದೇಶದಲ್ಲಿ ಇಂಥ ಸಾಧನೆ ಮಾಡಿರುವುದು ಪ್ರಶಂಸನೀಯ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ನೀತಿಯನ್ನು ವಿರೋಧಿಸಿ ದೇಶದ ಎಲ್ಲ ಕಾರ್ಮಿಕ ಸಂಘಟನೆ ಸೇರಿಕೊಂಡು ಎರಡು ದಿನ ದೇಶಾದ್ಯಂತ  ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿಮಾ ನೌಕರರ ಸಂಘದ ಅಧ್ಯಕ್ಷ ಎಂ.ಶರಣಗೌಡ, ಉಪಾಧ್ಯಕ್ಷೆ ವಂದನಾಬಾಯಿ, ಜಂಟಿ ಕಾರ್ಯದರ್ಶಿ ಎ.ಶ್ರೀಧರ, ಖಜಾಂಚಿ ರಾಘವೇಂದ್ರ, ಮಹಿಳಾ ಸಮಿತಿ ಉಪಸಂಚಾಲಕರಾದ ಬೃಂದಾವನಿ ನವರತ್ನ , ಮಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.