ADVERTISEMENT

ಬಡಿಬೇಸ: ಚಿಕ್ಕ ಶಾಲೆ ಚೊಕ್ಕ ಶಿಕ್ಷಣ

ಡಿ.ಎಚ್.ಕಂಬಳಿ
Published 8 ಜನವರಿ 2014, 5:25 IST
Last Updated 8 ಜನವರಿ 2014, 5:25 IST

ಸಿಂಧನೂರು: ಜಾಗ ಚಿಕ್ಕದಾದರೂ ಅತ್ಯಧಿಕ ಸಂಖ್ಯೆಯ ಮಕ್ಕಳಿಗೆ ಮೌಲ್ಯಯುತ ಚೊಕ್ಕ ಶಿಕ್ಷಣ ನೀಡುವ ಮೂಲಕ ಸ್ಥಳೀಯ ಬಡಿಬೇಸ ಸರ್ಕಾರಿ ಪ್ರಾಥಮಿಕ ಶಾಲೆ ಪಾಲಕರಿಂದ ಭೇಷ್‌ ಎನಿಸಿಕೊಂಡಿದೆ.

1976ರಲ್ಲಿ ಒಂದೇ ಕೊಠಡಿಯಿಂದ ಆರಂಭವಾಗಿರುವ ಶಾಲೆ ಈಗ ಚಿಕ್ಕ ಜಾಗದಲ್ಲಿ 1ರಿಂದ 7ನೇ ತರಗತಿವರೆಗೆ ಅಚ್ಚುಕಟ್ಟಾಗಿ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ಎಷ್ಟೋ ವಿದ್ಯಾರ್ಥಿಗಳು ಉನ್ನತ ಉದ್ಯೋಗ ಹಾಗೂ ವ್ಯಾಸಂಗದಲ್ಲಿ ತೊಡಗಿದ್ದಾರ. ಪಠ್ಯದ ಜೊತೆಗೆ ನೈತಿಕ, ಸಾಮಾನ್ಯ ಜ್ಞಾನ ಮೂಡಿಸುವಲ್ಲಿ ಶಾಲಾ ಶಿಕ್ಷಕರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಗರದ ಶಾಲೆಗಳಲ್ಲಿಯೇ 459 ಅತ್ಯಧಿಕ ಸಂಖ್ಯೆಯ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಮೂಲೆ ಗ್ರಂಥಾಲಯ ಎನ್ನುವ ವಿಶೇಷತೆ ಶಾಲೆಯಲ್ಲಿದೆ. ಮೂಲೆಯಲ್ಲಿ ಒಂದು ಮೇಜಿನ ಮೇಲೆ ವಿವಿಧ ಪುಸ್ತಕಗಳನ್ನು ದಿನವಿಡೀ ಹಾಕಲಾಗುತ್ತದೆ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ಪುಸ್ತಕಗಳನ್ನು ಹೆಸರು ನೋಂದಾಯಿಸಿ ಅಭ್ಯಾಸಕ್ಕೆ ತೆಗೆದುಕೊಳ್ಳಬಹುದಾಗಿದೆ. ಊಟಕ್ಕೆ ಬಿಟ್ಟ ಸಮಯದಲ್ಲಿ ಮೂಲೆ ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಒಟ್ಟು 1050 ವಿವಿಧ ಮಹತ್ವದ ಪುಸ್ತಕಗಳು ಈ ಗ್ರಂಥಾಲಯದಲ್ಲಿವೆ.

ಶಾಲಾ ಗೋಡೆಗಳ ಮೇಲೆ ರಾಷ್ಟ್ರಭಕ್ತರ, ವಿಜ್ಞಾನಿಗಳ, ಕವಿ, ವಿಮರ್ಶಕರ, ಜ್ಞಾನಪೀಠ ಹಾಗೂ ವಿಜ್ಞಾನದ ಪ್ರಾಯೋಗಿಕ ಚಿತ್ರಗಳು ಮತ್ತು ಗೋಡೆ ಬರೆಹದಲ್ಲಿ ಮೂಡಿರುವ ನುಡಿಮುತ್ತುಗಳು ಆಕರ್ಷಕವಾಗಿ. ಬಹುತೇಕ ವಿದ್ಯಾರ್ಥಿಗಳಿಗೆ ಬೆಂಚ್‌ ವ್ಯವಸ್ಥೆ ಕಲ್ಪಿಸಿವುರುವು ವಿಶೇಷವಾಗಿದೆ. 5 ಕೊಠಡಿಗಳಲ್ಲಿ ನಲಿ–ಕಲಿಯಲ್ಲಿ ಗಮನಾರ್ಹ ಸಾಧನೆ ಮಾಡಲಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ಚಿತ್ರಗಳ ಮೂಲಕ ಅವರ ಬುದ್ಧಿ ಶಕ್ತಿ ಹೆಚ್ಚಿಸಲು ಶ್ರಮಿಸಲಾಗುತ್ತದೆ.

ಶಾಲೆಯಲ್ಲಿಯೇ ಅಚ್ಚುಕಟ್ಟಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟಿರುವುದರಿಂದ ತಂಪು ನೀಡುತ್ತಿವೆ. ಕಲಿಕೆಗೂ ಇದು ಪೂರಕವಾಗಿದೆ. ಬಿಸಿಯೂಟದ ವ್ಯವಸ್ಥೆ, ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹಲವು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ.

‘ಹೆಚ್ಚಿನ ಕಾಳಜಿ’
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕ ಸಿಬ್ಬಂದಿಯವರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪಾಲಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಶಾಲೆಯಲ್ಲಿ ಸಣ್ಣಪುಟ್ಟ ಮೂಲ ಸೌಕರ್ಯಗಳ ಕೊರತೆಯಿದ್ದು ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುವುದು.
– ರಮೇಶ ಅಗ್ನಿ ಮುಖ್ಯ ಶಿಕ್ಷಕ

‘ಅಭಿವೃದ್ಧಿಗೆ ಬದ್ಧ’
ಶಾಲಾ ಅಭಿವೃದ್ಧಿ ನಿಟ್ಟಿನಲ್ಲಿ ಎಸ್ಡಿಎಂಸಿ ಸದಸ್ಯರು ಒಗ್ಗಟ್ಟಾಗಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಜಾಗದ ಕೊರತೆ ಬಿಟ್ಟರೆ ಶಾಲೆಗೆ ಏನೂ ಕೊರತೆ ಇಲ್ಲ. ಇಲ್ಲಿನ ಶಿಕ್ಷಕರೂ ಕೂಡ ಪ್ರಾಮಾಣಿಕತೆಯಿಂದ ಬೋಧಿಸುತ್ತಿದ್ದಾರೆ.
–ನರಸನಗೌಡ ಅಧ್ಯಕ್ಷರು, ಎಸ್‌ಡಿಎಂಸಿ

‘ನಮ್ದೆ ಮೇಲ್ಗೈ’

ನಮ್ಗೆ ಸರ್ಕಾರಿ ಶಾಲ್ಯಾಗ ಓದಿದಂಗ್‌ ಅನಿಸ್ತಾ ಇಲ್ಲ. ಖಾಸಗಿ ಶಾಲೆಗಿಂತ ನಾವ್‌ ಹೆಚ್ಚಿನ ಫಲಿತಾಂಶ ಪಡೆದಿದ್ದೇವೆ.
– ಮಂಜುನಾಥ ವಿದ್ಯಾರ್ಥಿ

ಪ್ರೋತ್ಸಾಹ

ಬೋಧನೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ನೀತಿಬೋಧನೆ, ಎಲ್ಲ ಚಟುವಟಿಕೆಗಳಿಗೂ ನಮ್ಮ ಶಿಕ್ಷಕರು ಪ್ರೋತ್ಸಾಹ ನೀಡಿದ್ದಾರೆ.
– ಶಂಕ್ರಪ್ಪ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT