ADVERTISEMENT

ಬತ್ತಿದ ಕೆರೆ; ಕುಡಿಯುವ ನೀರಿನ ಅಭಾವ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:37 IST
Last Updated 14 ಜುಲೈ 2017, 6:37 IST
ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಮುಖ್ಯಕೆರೆ ಬತ್ತಿರುವುದು
ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಮುಖ್ಯಕೆರೆ ಬತ್ತಿರುವುದು   

ಸಿಂಧನೂರು: ನಗರದ ಏಕೈಕ ಜಲಮೂಲವೆನಿಸಿರುವ ಕುಷ್ಟಗಿ ರಸ್ತೆಯ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಸಂಗ್ರಹಣೆ ತಳಮಟ್ಟಕ್ಕೆ ತಲುಪಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಜುಲೈ ತಿಂಗಳ ಮಧ್ಯಕ್ಕೆ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಬಾರದ ಕಾರಣ ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಕಡಿಮೆಯಾಗಿದೆ. ಇದರಿಂದ ಅಣೆಕಟ್ಟು ಇನ್ನೂ ಭರ್ತಿಯಾಗದೇ ಇರುವುದರಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಸಿಂಧನೂರಿನ ಕೆರೆಗೆ ಎಡದಂಡೆ ನಾಲೆಯ ಮೂಲಕವೇ ನೀರು ಸಂಗ್ರಹಣೆ ಮಾಡಬೇಕಿರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ.

ನಗರದ ಜನತೆಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಸಂಗ್ರಹಿಸಲ್ಪಟ್ಟ ದೊಡ್ಡಕೆರೆ, ಸಣ್ಣಕೆರೆ, ತುರ್ವಿಹಾಳ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ ಕೆರೆಗಳ ನೀರು ಖಾಲಿಯಾಗಿದೆ. ನಗರ ವ್ಯಾಪ್ತಿಯಲ್ಲಿ ಸುಮಾರು 70 ಸಾವಿರ ಜನ ವಾಸಿಸುತ್ತಿದ್ದು, ಪ್ರತಿನಿತ್ಯವೂ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದುಹೋಗುವವರ ಸಂಖ್ಯೆ ಸುಮಾರು 20 ಸಾವಿರ ಇದೆ.

ಇವರೆಲ್ಲರಿಗೆ ನೀರಿನ ಪೂರೈಕೆ ಮಾಡುವುದು ನಗರಸಭೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯ 8 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಕೆಲವು ಬಡಾವಣೆಗಳಿಗೆ 10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ADVERTISEMENT

‘ನಗರದ ಅಕ್ಕಪಕ್ಕದಲ್ಲಿರುವ ಕೊಳವೆಬಾವಿಗಳಿಂದ ಖಾಸಗಿ ಟ್ಯಾಂಕರ್‌ಗಳ ಮೂಲಕ ಹೊಟೇಲ್, ಅಂಗಡಿ ಮಾಲೀಕರು  ನೀರು ತರಿಸಿಕೊಳ್ಳುತ್ತಿದ್ದರು. ಈಗ ಅವು ಕೂಡ ಬತ್ತಿ ಹೋಗಿರುವುದರಿಂದ ಕೆರೆಯ ನೀರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎನ್ನುತ್ತಾರೆ ಅಂಗಡಿ ಮಾಲೀಕರು.

‘ನೀರಿನ ಸಮಸ್ಯೆಯ ತೀವ್ರತೆಯನ್ನು ಪರಿಗಣಿಸಿ ಶಾಸಕ ಹಂಪನಗೌಡ ಬಾದರ್ಲಿ ಅವರು ನಗರಸಭೆ ಅಧಿಕಾರಿಗಳೊಂದಿಗೆ ಗುರುವಾರ ಮುನಿರಾಬಾದ್‌ನ ಮುಖ್ಯ ಎಂಜಿನಿಯರ್‌ನ್ನು ಭೇಟಿಯಾಗಿ ಕುಡಿಯುವ ಉದ್ದೇಶಕ್ಕಾಗಿ ಕಾಲುವೆಗೆ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ’ ಎಂದು ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ ತಿಳಿಸಿದ್ದಾರೆ.

‘ಈ ಬಗ್ಗೆ ಜು.14ರಂದು ಜಿಲ್ಲಾಧಿಕಾರಿಗಳ ಸಭೆ ಕರೆಯಲಾಗಿದ್ದು ಅಲ್ಲಿ ನೀರು ಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ’ ಎಂದು  ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಪೌರಾಯುಕ್ತ ರಮೇಶ ವಟಗಲ್ ಅವರನ್ನು ಸಂಪರ್ಕಿಸಿದಾಗ ‘ಇನ್ನೂ 15 ದಿನಗಳವರೆಗೆ ಬೇಕಾಗುವಷ್ಟು ನೀರನ್ನು ಮೂರನೇ ಮೈಲ್‌ಕ್ಯಾಂಪಿನ ಗಂಗಾಧರ ಅವರ ಖಾಸಗಿ ಕೆರೆ ಹಾಗೂ ತುರ್ವಿಹಾಳ ಬಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆರೆಯಿಂದ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಆತಂಕ ಅಗತ್ಯವಿಲ್ಲ’ ಎಂದು ಹೇಳಿದರು.

* * 

ಶಾಸಕರು ಹಾಗೂ ನಗರಸಭೆ ಅಧಿಕಾರಿಗಳು ಮುನಿರಾಬಾದ್‌ನ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ನ್ನು ಭೇಟಿ ಮಾಡಿ ಪರಿಸ್ಥಿತಿಯ ಮನವರಿಕೆ ಮಾಡಲಾಗಿದೆ
ಮಂಜುಳಾ ಪಾಟೀಲ
ನಗರಸಭೆ ಅಧ್ಯಕ್ಷೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.